ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುವ ಏಪ್ರಿಲ್ 26ರಂದೇ ಕೇರಳ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಲೋಕಸಭೆಗೆ ಚುನಾವಣಾ ಮತದಾನ ನಡೆಯಲಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅರ್ಹ ಮತದಾರರಾಗಿರುವ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೇರಳ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದಲ್ಲಿ ಅವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ವಿ ವೋ ಇ ಡಿ (ವೋಟರ್ ಆನ್ ಎಲೆಕ್ಷನ್ ಡ್ಯೂಟಿ) ಯಡಿ ಈ ಅವಕಾಶ ಕಲ್ಪಿಸಲಾಗಿದೆ.
ಅಂತಹ ವಿ ವೋ ಇ ಡಿ ವೋಟರ್ ಗಳು ಕೇರಳದ ಸಕ್ಷಮ ಪ್ರಾಧಿಕಾರಿಗಳಾಗಿರುವ ಜಿಲ್ಲಾ ಚುನಾವಣಾಧಿಕಾರಿಗಳು ನೀಡಿರುವ ಚುನಾವಣಾ ಕರ್ತವ್ಯದ ಆದೇಶ ಹಾಗೂ ನಮೂನೆ 12ರೊಂದಿಗೆ, ಖುದ್ದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಚೇರಿಯ 3ನೇ ಮಹಡಿಯಲ್ಲಿರುವ ಕಾಯ್ದಿರಿಸಿರುವ ಕೊಠಡಿಗೆ ಆಗಮಿಸಿದ್ದಲ್ಲಿ ಅಲ್ಲಿ ಅವರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡುವ ಅವಕಾಶ ಒದಗಿಸಲಾಗುವುದು.
ಈ ಅಂಚೆ ಮತದಾನ ಪ್ರಕ್ರಿಯೆ ಏಪ್ರಿಲ್ 22ರಿಂದ 24ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೂ ಲಭ್ಯವಿರುತ್ತದೆ.
ಇದೇ ರೀತಿಯ ಸವಲತ್ತನ್ನು ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿರುವ ಕೇರಳ ರಾಜ್ಯದ ವಿ ವೋ ಇ ಡಿ ವೋಟರ್ಸ್ ಗಳಿಗೂ ಕಲ್ಪಿಸಲಾಗಿದ್ದು, ಈ ಬಗ್ಗೆ ಅಲ್ಲಿನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಕೇರಳ ರಾಜ್ಯದ ವಿ ವೋ ಇ ಡಿ ಮತದಾರರು ಅಂಚೆ ಮತದಾನ ಮಾಡಲು ಸಂಬಂಧಿಸಿದ ಸಕ್ಷಮ ವ್ಯಾಪ್ತಿಯ ಜಿಲ್ಲಾ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಎಂ.ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.