ಕಪಿತಾನಿಯೊ ಬಳಿ ಬಿಜೆಪಿ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ ಯತ್ನ-ಮಾಧ್ಯಮದವರೊಂದಿಗೆ ವಾಗ್ವಾದ

ಮಂಗಳೂರು: ಇಲ್ಲಿನ ಕಪಿತಾನಿಯೊ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಿ ಹೊರಗೆ ಬಂದಾಗ ಈ ಘಟನೆ ನಡೆದಿದೆ. ಪದ್ಮರಾಜ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಸಂದೀಪ್ ಎಕ್ಕೂರು ಎಂಬಾತ ‘ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು”ಎಂದು ಮಾಧ್ಯಮದವರನ್ನು ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಆತನ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲಿದ್ದ ಇನ್ ಸ್ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಗ ಪೊಲೀಸ್ ಅಧಿಕಾರಿ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಕಾರ್ಯಕರ್ತ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮದ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ.ಇದರಿಂದಾಗಿ ಸ್ಥಳದಲ್ಲಿ ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುವುದಾಗಿ ಪೊಲೀಸ್ ಅಧಿಕಾರಿ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.

LEAVE A REPLY

Please enter your comment!
Please enter your name here