ಪ್ರತಿ ಗ್ರಾಮದಲ್ಲಿ ಕೋಮು ಸಾಮರಸ್ಯ ಸಮಿತಿ ರಚನೆ – 1.20 ಲಕ್ಷ ಮತಗಳ ಅಂತರದ ಗೆಲುವಿನ ವಿಶ್ವಾಸ: ಆರ್‌.ಪದ್ಮರಾಜ್‌

ಮಂಗಳೂರು: ‘ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ವಾಮಿ ವಿವೇಕಾನಂದ ಕೋಮು ಮತ್ತು ಸಾಮಾಜಿಕ ಸಾಮರಸ್ಯ ಸಮಿತಿ ರಚಿಸಲು ಕ್ರಮವಹಿಸುತ್ತೇನೆ’ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್‌.ಪದ್ಮರಾಜ್‌ ಭರವಸೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಇದೊಂದು ಉತ್ತಮ ಕಾರ್ಯಕ್ರಮ. ಇದನ್ನು ಆದಷ್ಟು ಶೀಘ್ರವಾಗಿ ನೆರವೇರಿಸುವ ಅಗತ್ಯವಿದೆ’ ಎಂದರು.‘ವಿರೋಧ ಪಕ್ಷದವರು ನಮ್ಮ ಬಗ್ಗೆ ಅಪಪ್ರಚಾರ ನಡೆಸಿದರು. ಆದರೂ ವಿಚಲಿತರಾಗದೇ ನಮ್ಮ ಕಾರ್ಯಕರ್ತರು ಪಕ್ಷದ ಸಾಧನೆ, ಮುಂದಿನ ಯೋಜನೆ ಹಾಗೂ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಿ ಮತಯಾಚಿಸಿದ್ದಾರೆ. ಆರೋಪ, ಟೀಕೆಗಳ ಗೋಜಿಗೆ ಹೋಗದೇ ಪ್ರೀತಿ ಹಂಚಿದ್ದಾರೆ. ತುಳುನಾಡಿನ‌ ಸಾಮರಸ್ಯದ ಸಂಸ್ಕೃತಿಗೆ ಆಗಿರುವ ಧಕ್ಕೆಯ ಬಗ್ಗೆ ವಿವರಿಸಿದ್ದಾರೆ. ಇದು ಫಲಪ್ರದ ಆಗಿದೆ. ನಮ್ಮ ಸಾಮರಸ್ಯದ ಮಂತ್ರವನ್ನು ಜನ ಬೆಂಬಲಿಸಿದ್ದು, ಬದಲಾವಣೆಗಾಗಿ ಮತ ಹಾಕಿದ್ದಾರೆ. ತುಳುನಾಡು ಗೆದ್ದಿದೆ’ ಎಂದರು.

‘ಕಾಂಗ್ರೆಸ್‌ ಮತ್ತು ಬಿಜೆಪಿಯ ಸಾಧನೆಯನ್ನು ತುಲನೆ ಮಾಡಿ ಜನ ಮತ ಹಾಕಿದ್ದು, 1.20 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಾದ್ಯಂತ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಆದರೂ ಕಪಿತಾನಿಯೊ ಶಾಲೆಯ ಮತಗಟ್ಟೆ ಬಳಿ ವಿರೋಧ ಪಕ್ಷದವರು ತಮ್ಮ ಹತಾಶೆಯನ್ನು ಹೊರಹಾಕಿದರು. ಈ ಗಲಾಟೆ ಅನವಶ್ಯಕವಾಗಿತ್ತು. ಈ ವೇಳೆ ನಮ್ಮ ಕಾರ್ಯಕರ್ತರು ದುಡುಕದಂತೆ ನೋಡಿಕೊಂಡಿದ್ದೇವೆ. ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾದರೆ ಅನುಭವಿಸುವವರು ಅವರ ಕುಟುಂಬದವರು. ಇಂತಹ ಘಟನೆಗಳು ಎಲ್ಲೂ ನಡೆಯಬಾರದು’ ಎಂದರು.

‘ನಾವೇ ಗೆಲ್ಲಲಿದ್ದು, ಇದು ಜಿಲ್ಲೆಯಲ್ಲಿ ಪಕ್ಷದ ಪುನಃಶ್ಚೇತನಕ್ಕೆ ನಾಂದಿ ಹಾಡಲಿದೆ. ಪಕ್ಷದ ಸಂಘಟನೆಗೂ ಆದ್ಯತೆ ನೀಡುತ್ತೇನೆ. ನಾಯಕರ ಜೊತೆ ಬೂತ್‌ ಮಟ್ಟದಲ್ಲಿ ಸಭೆ ನಡೆಸಿ ಪಕ್ಷದ ಸಂಘಟನೆಯಲ್ಲಿ ತೊಡಗುತ್ತೇನೆ. ಕೆಲವು ಬಿಜೆಪಿ ನಾಯಕರೂ ಕಾಂಗ್ರೆಸ್‌ ಸೇರಲಿದ್ದು, ಜಿಲ್ಲೆಯಲ್ಲಿ ಪಕ್ಷದ ಗತ ವೈಭವ ಮರುಕಳಿಸಲಿದೆ’ ಎಂದರು. ವ್ಯಾಪಾರದಲ್ಲೂ ಹಿಂದೂ–ಮುಸ್ಲಿಂ ಎಂಬ ತಾರತಮ್ಯ ಸಲ್ಲದು. ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿಸಿಕೊ‌ಂಡವರೇ ಭಯೋತ್ಪಾದಕರು.‌ ಸಾಮರಸ್ಯ ಕಾಪಾಡಿ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗುವಂತೆ ಮಾಡಬೇಕು. ಬೇರೆ ಬೇರೆ ದೇಶಗಳ‌ಲ್ಲಿ ನೆಲೆಸಿರುವ ಸಲಹೆಗಾರರನ್ನು ಆಹ್ವಾನಿಸಿ ಜಿಲ್ಲೆಯ ಅಭಿವೃದ್ಧಿಗೆ ನೀಲಿ ನಕಾಶೆ ಸಿದ್ಧಪಡಿಸುತ್ತೇವೆ’ ಎಂದರು. ‘ನಾನು ಯಾವತ್ತೂ ಸ್ವಾರ್ಥಕ್ಕಾಗಿ ಜನಾರ್ದನ ಪೂಜಾರಿ ಅವರ ಹೆಸರನ್ನು ದುರ್ಬಳಕೆ ಮಾಡಿಲ್ಲ. ಪಕ್ಷದಿಂದ ಟಿಕೆಟ್‌ ಪಡೆಯುವುದಕ್ಕೂ ಅವರ ಹೆಸರನ್ನು ಬಳಸಿಲ್ಲ. ಬಡವರ ಬಗ್ಗೆ ವಹಿಸುತ್ತಿದ್ದ ಕಾಳಜಿ ನೋಡಿ ಅವರ ನಡೆ ನುಡಿಯನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ಅವರ ಹೆಸರನ್ನು ದುರ್ಬಳಕೆ ಮಾಡಿದರೆ ದೇವರು ಮೆಚ್ಚುವುದಿಲ್ಲ. ಯಾರೇ ಬಂದು ಕೇಳಿದರೂ ಅವರು ಆಶೀರ್ವಾದ ಮಾಡುತ್ತಾರೆ’ ಎಂದು ಪದ್ಮರಾಜ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷದ ಮುಖಂಡರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶುಭೋದಯ ಆಳ್ವ, ಮೊಹಮ್ಮದ್, ಶಶಿಧರ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here