ಮಂಗಳೂರು (ಬೀಜಿಂಗ್): ದಕ್ಷಿಣ ಚೀನಾದ ಗ್ವಾಂಗ್ಡಾಂಗ್ ಪ್ರಾಂತದಲ್ಲಿ ಹೆದ್ದಾರಿ ಕುಸಿದು ಕನಿಷ್ಠ 48 ಮಂದಿ ಸಾವನ್ನಪ್ಪಿದ್ದು ಇತರ 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಚೀನಾದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದೆ. ಮಿಜೌ ನಗರವನ್ನು ದಾಬು ನಗರಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಬುಧವಾರ ಸುಮಾರು 60 ಅಡಿಯಷ್ಟು ರಸ್ತೆ ಕುಸಿದುಬಿದ್ದು ದುರಂತ ಸಂಭವಿಸಿದೆ. 20ಕ್ಕೂ ಅಧಿಕ ವಾಹನಗಳು ರಸ್ತೆಯಲ್ಲಿ ಉಂಟಾದ ಕಂದಕಕ್ಕೆ ಉರುಳಿದೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ. ಜನನಿಬಿಡ ಕೈಗಾರಿಕಾ ಕೇಂದ್ರವಾಗಿರುವ ಗ್ವಾಂಗ್ಡಾಂಗ್ನಲ್ಲಿ ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸುರಿಯುತ್ತಿದ್ದು ಹಲವೆಡೆ ಭೂಕುಸಿತದ ವರದಿಯಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ದುರಂತ ಸಂಭವಿಸುವ ಸಾಧ್ಯತೆಯಿದೆ ಎಂದು ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖೆ ಎಚ್ಚರಿಕೆ ನೀಡಿದೆ.
ಗುರುವಾರ ಸಂಜೆಯವರೆಗಿನ ಮಾಹಿತಿಯಂತೆ ಹೆದ್ದಾರಿ ಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 48ಕ್ಕೇರಿದೆ. ಇತರ 30 ಮಂದಿ ಗಾಯಗೊಂಡಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ. ಕ್ರೇನ್, ಜೆಸಿಬಿ ಬಳಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕಲ್ಲು ಮಣ್ಣಿನ ರಾಶಿಯಡಿ ಕೆಲವರು ಸಿಲುಕಿರುವ ಶಂಕೆಯಿದೆ ಎಂದು ಮಿಜೌ ಪ್ರಾಂತದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಮಾ ಝೆಂಗ್ಯಾಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.