ಮಂಗಳೂರು(ಉಡುಪಿ): ಆಗುಂಬೆ ಘಾಟ್ನ ಸೂರ್ಯಾಸ್ತ ಸ್ಥಳದ ರಿಟೈನರ್ ಗೋಡೆಯ ಬಳಿ ಬಿರುಕು ಕಂಡುಬಂದಿದೆ. ಭಾರಿ ವಾಹನಗಳ ಓಡಾಟಕ್ಕೆ ತಡೆಗೋಡೆ ಕುಸಿದು ಬೀಳುವ ಸಾಧ್ಯತೆ ಇದ್ದು ಘಾಟಿ ಬಂದ್ ಆಗುವ ಶಂಕೆ ಎದುರಾಗಿದೆ.
ಘಾಟಿಯ 14 ನೇ ತಿರುವಿನ ಬಳಿ ವಾಹನವು ಎಡ ಬದಿಯಲ್ಲಿ ಚಲಿಸಿದರೆ ರಿಟೈನರ್ ಗೋಡೆ ಸಂಪೂರ್ಣವಾಗಿ ಕುಸಿಯುವ ಎಲ್ಲಾ ಸಾಧ್ಯತೆಗಳಿವೆ. ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಘಾಟಿ ಮಾರ್ಗವಾಗಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚು. ರಿಟೈನರ್ ಗೋಡೆಯ ಬಿರುಕು ತಕ್ಷಣ ದುರಸ್ತಿ ಪಡಿಸದಿದ್ದರೆ ಮಳೆಗಾಲದಲ್ಲಿ ಗೋಡೆ ಕುಸಿಯುವ ಸಾಧ್ಯತೆಯಿದೆ.
ಪ್ರತಿ ವರ್ಷ ಘಾಟಿ ಭಾಗದ ಕೆಲವು ಭಾಗಗಳು ಕುಸಿದು ಬೀಳುತ್ತಿದ್ದು, ಅವುಗಳನ್ನು ದುರಸ್ತಿ ಮಾಡುತ್ತಿಲ್ಲ. ಇದು ಕೂಡ ಬಹುತೇಕ ಘಾಟ್ ವಿಭಾಗ ದುರ್ಬಲವಾಗಲು ಕಾರಣವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಈ ಜನರಿಗೆ ಆಗುಂಬೆ ಘಾಟಿ ಬಹಳ ಮುಖ್ಯವಾಗಿದೆ. ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ಬಿರುಕು ಬಿಟ್ಟಿರುವುದನ್ನು ದುರಸ್ತಿ ಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.