ದುಬೈ-ಮಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕನ ಅನುಚಿತ ವರ್ತನೆ-ದೂರು ದಾಖಲು

ಮಂಗಳೂರು: ದುಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ವಿಮಾನದಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ ಸಂಬಂಧ ಏರ್ ಇಂಡಿಯಾ ಎಕ್ಸ್ ಪ್ರೆಸ್ ಭದ್ರತಾ ಸಂಯೋಜಕ ಸಿದ್ದಾರ್ಥ ದಾಸ್ ನೀಡಿದ ದೂರಿನ ಹಿನ್ನಲೆಯಲ್ಲಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 8 ರಂದು ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ, ಕೇರಳದ ಕಣ್ಣೂರಿನ ನಿವಾಸಿ ಮುಹಮ್ಮದ್ ಬಿ.ಸಿ(24) ವಿರುದ್ದ ಈ ಆರೋಪ ಕೇಳಿಬಂದಿದೆ.  ದುಬೈನಿಂದ ವಿಮಾನದಲ್ಲಿ ಬರುತ್ತಿದ್ದ ವೇಳೆ ಮೊಹಮ್ಮದ್ ಶೌಚಾಲಯಕ್ಕೆ ತೆರಳಿದ್ದು ನಂತರ ಹೊರಬಂದು ವಿಮಾನದ ಪ್ರಯಾಣಿಕರಲ್ಲದ ವ್ಯಕ್ತಿ ಬಗ್ಗೆ ಸಿಬ್ಬಂದಿ ಬಳಿ ವಿಚಾರಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ಸಿಬ್ಬಂದಿ ವರ್ಗದವರಿಗೆ ತೊಂದರೆ ನೀಡಿದ್ದರು. ಪರಿಚಾರಕ ಸಿಬ್ಬಂದಿ ಆತನ ಬಳಿಯೇ ಇದ್ದರೂ ಪದೇ – ಪದೇ ಕಾಲಿಂಗ್ ಬಟನ್ ಪ್ರೆಸ್ ಮಾಡುವುದು, ವಿಮಾನದಲ್ಲಿದ್ದ ಲೈಫ್ ಜಾಕೆಟ್ ತೆಗೆದು ಸಿಬ್ಬಂದಿಯವರ ಕೈಗೆ ನೀಡಿ, ವಿಮಾನ ಇಳಿದ ನಂತರ ಇದನ್ನು ಬಳಸುವುದಾಗಿ ಹೇಳುವುದು. ವಿಮಾನ ಸಮುದ್ರದ ಮೇಲಿರುವಾಗ ತಾನು ವಿಮಾನದಿಂದ ಹೊರಗಿಳಿಯಬೇಕು, ಹಾರಬೇಕು ಎಂದು ಬೆದರಿಕೆ ಒಡ್ಡುವುದು, ಇತರ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಇದಲ್ಲದೇ ವಿಮಾನ ಬೆಳಗ್ಗೆ 7.30 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆಗೂ ಅನುಚಿತವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here