ಉಪ್ಪಿನಂಗಡಿ: ಸಹಾಯ ಕೇಳುವ ನೆಪ-ಹಾಡಹಗಲು ಅಪರಿಚಿತರಿಂದ ಮಹಿಳೆಯ ಚಿನ್ನಾಭರಣ ದರೋಡೆ

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಬದ್ಯಾರು ಎಂಬಲ್ಲಿ ಏಕಾಂಗಿ ಮಹಿಳೆಯೊಬ್ಬರು ವಾಸವಿದ್ದ ಮನೆಗೆ ನೀರು ಕೇಳಿಕೊಂಡು ಬಂದ ಅಪರಿಚಿತ ಪುರುಷ ಮತ್ತು ಮಹಿಳೆ ಹಾಡುಹಗಲೇ ಮನೆಯೊಳಗೆ ಪ್ರವೇಶಿಸಿ ಆಭರಣಕ್ಕಾಗಿ ಜಾಲಾಡಿದ್ದಲ್ಲದೆ, ಮಗುವನ್ನು ಕೊಲ್ಲುವ ಜೀವ ಬೆದರಿಕೆಯೊಡ್ಡಿ ಮೈ ಮೇಲಿದ್ದ ಒಂದು ಲಕ್ಷಕ್ಕೂ ಮಿಗಿಲಾದ ಮೊತ್ತದ ಚಿನ್ನಾಭರಣವನ್ನು ದರೋಡೆಗೈದ ಘಟನೆ ಶನಿವಾರ ಸಂಭವಿಸಿದೆ.

ಜಕಾರಿಯಾ ಎಂಬವರ ಪತ್ನಿ 25 ವರ್ಷ ಪ್ರಾಯದ ಸುಹೈಬಾ ರವರು ದಿನಾಂಕ ಮೇ.11 ರಂದು ಬೆಳಗ್ಗಿನ 10.20ರ ಸುಮಾರಿಗೆ ಮನೆಯ ಎದುರು ಸಿಟೌಟ್‌ನಲ್ಲಿ ಕಸ ಗುಡಿಸುತ್ತಿರುವ ವೇಳೆ ಮನೆಯ ಅಂಗಳಕ್ಕೆ ಅಪರಿಚಿತ ಪುರುಷ ಮತ್ತು ಮಹಿಳೆ ಬಂದು ಸುಹೈಬಾರವರಲ್ಲಿ ಕರಪತ್ರವೊಂದನ್ನು ತೋರಿಸಿ ಸಹಾಯ ಮಾಡುವಂತೆ ಕೇಳಿದ್ದಾರೆ. ಸುಹೈಬಾಳೊಂದಿಗೆ ಮಾತು ಮುಂದುವರಿಸಿ ಮನೆ ಮಂದಿಯ ಬಗ್ಗೆ ವಿಚಾರಿಸಿ ಕುಡಿಯಲು ನೀರು ಕೇಳಿದ್ದಾರೆ. ಮನೆಯ ಹೊರಗಿರುವ ನಳ್ಳಿಯಿಂದ ನೀರು ತರಲೆಂದು ಸುಹೈಬಾ ಬಾಟಲಿ ಹುಡುಕುತ್ತಿರುವಾಗ ಅಗಂತುಕ ಜೋಡಿ ಮನೆಯ ಒಳಗೆ ಪ್ರವೇಶಿಸಿದ್ದಾರೆ.

ಇದನ್ನು ಕಂಡು ಬೊಬ್ಬೆ ಹಾಕಿ ನೀವು ಎಲ್ಲಿಗೆ ಹೋಗುತ್ತೀರಿ? ಎಂದು ಕೇಳಿದ ಸುಹೈಬಾ, ಅವರಿಬ್ಬರನ್ನು ಹಿಂಬಾಲಿಸಿ ಮನೆಯೊಳಗೆ ಬಂದಿದ್ದಾರೆ. ಆ ಇಬ್ಬರು ಮಲಗುವ ಕೋಣೆಯ ಕಬ್ಬಿಣದ ಕಪಾಟಿನ ಬಾಗಿಲು ತೆರೆದು ತಡಕಾಡುತ್ತಿರುವುದನ್ನು ಕಂಡ ಸುಹೈಬಾ ಇನ್ನೊಂದು ಕೋಣೆಯಲ್ಲಿರುವ ಮಗುವನ್ನು ಎತ್ತಿಕೊಂಡು ಕೋಣೆಯೊಳಗಿನ ಬಾತ್‌ರೂಂನ ಒಳ ಹಾಕಿ, ಕೋಣೆಯ ಬಾಗಿಲು ಹಾಕಿ ಹೊರ ಬಂದು ಪತಿಗೆ ಫೋನ್ ಕಾಲ್ ಮಾಡಲು ಮುಂದಾಗಿದ್ದ ಆ ಇಬ್ಬರು ವ್ಯಕ್ತಿಗಳು ಸುಹೈಬಾ ಬಳಿ ಬಂದಿದ್ದಾರೆ. ಮಹಿಳೆ ಸುಹೈಬಾ ಕೈಯಲ್ಲಿದ್ದ ಮೊಬೈಲ್ ಫೋನನ್ನು ಎಳೆದು ಬಿಸಾಡಿ ಕೆನ್ನೆಗೆ ಹೊಡೆದಿದ್ದು, ಜೊತೆಗಿದ್ದ ವ್ಯಕ್ತಿ ಒಂದು ಕೈಯಲ್ಲಿ ಸುಹೈಬಾ ಜುಟ್ಟನ್ನು ಹಿಡಿದು ಇನ್ನೊಂದು ಕೈಯಲ್ಲಿ ಚೂರಿ ತೋರಿಸಿ ನಿನ್ನಲ್ಲಿರುವ ಚಿನ್ನ ಕೊಡು, ಇಲ್ಲದಿದ್ದರೆ ನಿನ್ನ ಮಗುವನ್ನು ಕೊಂದು ಹಾಕುತ್ತೇನೆ ಎಂದು ಬೆದರಿಸಿದ್ದಾರೆ. ಇದರಿಂದ ಬೆದರಿದ ಮಹಿಳೆ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ತೆಗೆದು ಕೊಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಕಳ್ಳ ಜೋಡಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದು ತೆಗೆದಿದ್ದಾರೆ. ಸರ ಎಳೆಯುವ ರಭಸಕ್ಕೆ ಸುಹೈಬಾ ಕುತ್ತಿಗೆಯಲ್ಲಿ ಗಾಯವಾಗಿದ್ದು ಜೋರಾಗಿ ಕಿರುಚಿದ್ದಾರೆ. ಇದರಿಂದ ಬೆದರಿದ ಕಳ್ಳರಿಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸುಹೈಬಾ ಕಿರುಚಿದ್ದನ್ನು ಕೇಳಿದ ಪಕ್ಕದ ಮನೆಯ ಅಸ್ಮಾ ಎಂಬವರು ಸುಹೈಬಾ ಮನೆಗೆ ತಲುಪುವಷ್ಟರಲ್ಲಿ ರಸ್ತೆಯಲ್ಲಿ ಪುರುಷ ಮತ್ತು ಮಹಿಳೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿರುವುದನ್ನು ಕಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳು ಬೆದರಿಸಿ 6 ಗ್ರಾಂ ತೂಕದ ಎರಡು ಚಿನ್ನದ ಉಂಗುರ ಮತ್ತು ಕುತ್ತಿಗೆಯಿಂದ ಎಳೆದು ತೆಗೆದ ಚಿನ್ನದ ಕರಿಮಣಿ ಸರ 12 ಗ್ರಾಂ ತೂಕವಿದ್ದು, ಒಟ್ಟು ಮೌಲ್ಯ 1 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಡಹಗಲೇ ಮನೆಗೆ ಬಂದು ಸಹಾಯ ಯಾಚಿಸುವ ನೆಪದಲ್ಲಿ ದರೋಡೆ ನಡೆಸಿದ ಕೃತ್ಯ ನಾಗರಿಕ ವಲಯದಲ್ಲಿ ಕಳವಳ ಮತ್ತು ಆತಂಕ ಸೃಷ್ಟಿಸಿದೆ. ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಉಪ್ಪಿನಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here