ಮಂಗಳೂರು(ಬೆಂಗಳೂರು): ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಆರೋಗ್ಯ ಸ್ಥಿರವಾಗಿದೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಎಚ್ಎಎಲ್ ವಿಮಾನ ನಿಲ್ದಾಣ ಸಮೀಪದಲ್ಲಿರುವ ಮಣಿಪಾಲ್ ಆಸ್ಪತ್ರೆಯ ಐಸಿಯು ಘಟಕದಲ್ಲಿ 91 ವರ್ಷದ ಎಸ್.ಎಂ.ಕೃಷ್ಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಎಸ್.ಎಂ.ಕೃಷ್ಣ ಅವರಿಗೆ ಡಾ.ಸತ್ಯನಾರಾಯಣ ಮೈಸೂರು ಹಾಗೂ ಡಾ.ಸುನೀಲ್ ಕಾರಂತ್ ನೇತೃತ್ವದ ಕ್ರಿಟಿಕಲ್ ಕೇರ್ ತಂಡ ಚಿಕಿತ್ಸೆ ನಿಡುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ಇದೇ ತಿಂಗಳ ಆರಂಭದಲ್ಲಿ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆನಂತರ, ಗುಣಮುಖರಾಗಿ ಅವರು ಮನೆಗೆ ಹಿಂದಿರುಗಿದ್ದರು. ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಮತ್ತೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಎಸ್.ಎಂ.ಕೃಷ್ಣ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.