ಮಂಗಳೂರು(ಬೆಂಗಳೂರು): ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ನಟಿಸಿ ಪತ್ನಿಗೆ ಭಯ ಹುಟ್ಟಿಸಲು ಪ್ರಯತ್ನ ಪಟ್ಟ ಪತಿ ಆಕಸ್ಮಿಕವಾಗಿ ನೇಣಿನ ಕುಣಿಕೆಗೆ ಸಿಕ್ಕು ಮೃತಪಟ್ಟ ಘಟನೆ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್(28) ಮೃತ ದುರ್ದೈವಿ.
ಅಮಿತ್ ಕುಮಾರ್ ಜಿಮ್ ಟ್ರೈನರ್ ಆಗಿದ್ದು, 10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ. ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ಓರ್ವ ಯುವತಿಯನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದ. ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ಪತಿಗೆ ಸಮಯ ನೀಡುತ್ತಿರಲಿಲ್ಲ ಎನ್ನಲಾಗುತ್ತಿದ್ದು, ಫ್ರೆಂಡ್ಸ್ ಜೊತೆ ಪದೇ ಪದೇ ಫೋನ್ ಕಾಲ್ನಲ್ಲಿರುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹೀಗಾಗಿ ಪತಿ ತೊರೆದ ಪತ್ನಿ ಬೇರೆಡೆ ವಾಸವಿದ್ದರು. ಮನೆಗೆ ಪತ್ನಿ ವಾಪಾಸ್ ಬರುವಂತೆ ಪತಿ ಅಮಿತ್ ಪದೇ ಪದೇ ಕರೆ ಮಾಡಿ ಮನವಿ ಮಾಡುತ್ತಿದ್ದ. ನಿನ್ನೆ ಕೂಡ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ನಟಿಸುವ ವೇಳೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ಬಾಗಲಗುಂಟೆಯ ಮನೆಯಲ್ಲಿ ನೇಣುಬಿಗಿದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದೆ. ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.