ಮಂಗಳೂರು: ಭಾರತೀಯ ಹವಾಮಾನ ಇಲಾಖೆಯು ಮೇ.16ರಿಂದ 19ರ ವರೆಗೆ ಕರಾವಳಿಯಲ್ಲಿ ಎಲ್ಲೋ ಅಲರ್ಟ್ ಘೋಷಿಸಿದೆ. ಈ ವೇಳೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.
ಇನ್ನೊಂದೆಡೆ ಅರಬ್ಬೀ ಸಮುದ್ರದ ದಕ್ಷಿಣ ಹಾಗೂ ಪೂರ್ವ ಭಾಗದ ನಡುವಿನ ಆಗ್ನೇಯ ದಿಕ್ಕಿನಲ್ಲಿ ದೊಡ್ಡ ಪ್ರಮಾಣದ ಸುಳಿಗಾಳಿಯೊಂದು ಆರಂಭವಾಗಿದ್ದು, ಈ ಸುಳಿಗಾಳಿಯು ಪ್ರಸ್ತುತ ಕೇರಳ ತೀರದಿಂದ ಮರಾಠವಾಡದ ಕಡೆಗೆ ಚಲಿಸುತ್ತಿದೆ ಎನ್ನಲಾಗಿದೆ. ಇದರ ಪರಿಣಾಮ ಮುಂದಿನ ಒಂದು ವಾರದವರೆಗೆ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.