ಮಂಗಳೂರು(ನವದೆಹಲಿ): ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮ ಆತಂಕ ಸೃಷ್ಟಿಸಿರುವಾಗಲೇ ಭಾರತದ ಸ್ವದೇಶಿ ಕೊರೊನಾ ಲಸಿಕೆ ಕೋವ್ಯಾಕ್ಸಿನ್‌ನಲ್ಲೂ ಅಡ್ಡ ಪರಿಣಾಮ ಇರುವುದು ದೃಢವಾಗಿದೆ.
ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ಸೈಡ್ ಎಫೆಕ್ಟ್ ಇರುತ್ತದೆ ಎನ್ನುವ ಅಂಶ ಬಯಲಾಗಿದೆ. ಕೋವ್ಯಾಕ್ಸಿನ್ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿಯಿಂದ ಬೆಳಕಿಗೆ ಬಂದಿದೆ. ಕೋವ್ಯಾಕ್ಸಿನ್ ಪಡೆದ ಅಧ್ಯಯನಕ್ಕೊಳಪಟ್ಟ 926 ಮಂದಿಯ ಪೈಕಿ ಶೇ.50ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದೆ. ಉಸಿರಾಟದಲ್ಲಿ ಸೋಂಕು, ಗಂಟಲು ಕೆರೆತ, ಮೂಗು ಸೋರುವಿಕೆ, ಕೆಮ್ಮಿನ ಲಕ್ಷಣ ಕಂಡುಬಂದಿದೆ. ಶೇ.1ರಷ್ಟು ಪ್ರಕರಣಗಳಲ್ಲಿ ಪಾರ್ಶ್ವವಾಯು, ಗುಲ್ಲೈನ್ ಬರ್ರೆ ಸಿಂಡ್ರೋಮ್ ಕಂಡುಬಂದಿದೆ ಎಂದು ಸ್ಟ್ರಿಂಜರ್ ನೇಚರ್ ಜರ್ನಲ್ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಮೂರನೇ ಒಂದು ಭಾಗದಷ್ಟು ಜನರಲ್ಲಿ ಚರ್ಮ ಸಂಬಂಧಿತ ಸಮಸ್ಯೆ, ನರಗಳಿಗೆ ಸಂಬಂಧಿಸಿದ ಅಸ್ವಸ್ಥತೆ ಮತ್ತು ಸಾಮಾನ್ಯ ಅಸ್ವಸ್ಥತೆ ಕಂಡುಬಂದಿದೆ. 2022ರ ಜನವರಿಯಿಂದ 2023ರ ಆಗಸ್ಟ್‌ವರೆಗೆ ಕೋವ್ಯಾಕ್ಸಿನ್ ಪಡೆದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ಜರ್ನಲ್ ವರದಿ ವಿವರಿಸಿದೆ.