ಮಂಗಳೂರು(ಹುಬ್ಬಳ್ಳಿ): ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಕೊಲೆ ಮಾಡಿದ್ದ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗಿರೀಶ್ ಬಂಧನವನ್ನು ಹುಬ್ಬಳ್ಳಿ ಪೊಲೀಸ್ ಕಮಿಷನರ್ ರೇಣುಕಾ ಅವರು ಖಚಿತಪಡಿಸಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ವೀರಾಪುರ ಓಣಿಯಲ್ಲಿ ಅಂಜಲಿ ಎಂಬ ಅಮಾಯಕ ಯುವತಿಯ ಕೊಲೆ ನಡೆದಿತ್ತು. ಕೊಲೆಗಡುಕ ಅಂಜಲಿ ಮನೆಗೇ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಹುಬ್ಬಳ್ಳಿ ಪೊಲೀಸರು ಗಿರೀಶ್ ಪತ್ತೆಗೆ ಎರಡು ತಂಡಗಳನ್ನು ರಚಿಸಿ ಆತನಿಗಾಗಿ ಬಲೆ ಬೀಸಿದ್ದರು. ನಿಖರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಗಿರೀಶ್ ನನ್ನು ದಾವಣಗೆರೆಯ ರೈಲು ನಿಲ್ದಾಣದಲ್ಲಿ ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿ ಹುಬ್ಬಳ್ಳಿಗೆ ಕರೆತಂದಿದ್ದಾರೆ. ನೇಹಾ ಹಿರೇಮಠ ಎಂಬ ಯುವತಿಯ ದಾರುಣ ಕೊಲೆಯ ನಂತರ ಅಂಜಲಿ ಅಂಬಿಗೇರ ಎಂಬ ಯುವತಿಯ ಕೊಲೆ ನಡೆದಿದ್ದು, ಹುಬ್ಬಳ್ಳಿ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಕರ್ತವ್ಯಲೋಪದ ಕಾರಣದಿಂದ ಈಗಾಗಲೇ ಓರ್ವ ಇನ್ಸ್ ಪೆಕ್ಟರ್ ಮತ್ತು ಪೇದೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮೈಸೂರಿನಿಂದ ತಲೆಮರೆಸಿಕೊಳ್ಳುವ ಉದ್ದೇಶದಿಂದ ಗೋವಾ-ಮಹಾರಾಷ್ಟ್ರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗಿರೀಶ್ ಸಾವಂತ್ ಕಳೆದ ರಾತ್ರಿ 11:30ರ ಸುಮಾರಿಗೆ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ರೈಲ್ವೆ ಪೊಲೀಸರು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ದಾವಣಗೆರೆ ಪೊಲೀಸರು ಆತನ ಗುರುತು ಪತ್ತೆ ಹಚ್ಚಿ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಇಂದು ಮುಂಜಾವ 4:30ರ ಸುಮಾರಿಗೆ ಆತನನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಹ ಪ್ರಯಾಣಿಕರಾಗಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಪ್ರಯಾಣಿಕರನ್ನು ಆತನಿಗೆ ಥಳಿಸಿದ್ದಾರೆ. ಈ ವೇಳೆ ರೈಲಿನಿಂದ ಹಾರಿದ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಗಿರೀಶ್ ರೈಲಿನಿಂದ ಕೆಳಗೆ ಬೀಳಲು ಕಾರಣ ಏನೆಂಬುದನ್ನು ಆತನ ಹೇಳಿಕೆಯಿಂದಷ್ಟೇ ತಿಳಿದುಬರಬೇಕಿದೆ. ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿರುವುದರಿಂದ ಗಿರೀಶ್ ಸದ್ಯ ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಪೊಲೀಸ್ ಆಯಕ್ತರು ತಿಳಿಸಿದ್ದಾರೆ.