ಮಂಗಳೂರು(ಬೆಳಗಾವಿ): ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆ ನೌಕರನೊಬ್ಬನನ್ನು ಬರ್ಬರವಾಗಿ ಇರಿದು ಕೊಂದಿದ್ದಾರೆ. ಅಲ್ಲದೇ, ಟಿಟಿಇ ಸೇರಿದಂತೆ ಮೂವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಲೋಂಡಾ ನಿಲ್ದಾಣದ ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಮೃತ ರೈಲ್ವೆ ನೌಕರ ಕೋಚ್ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಟಿಟಿಇ ಹಾಗೂ ಮತ್ತಿಬ್ಬರ ಮೇಲೆ ದಾಳಿಕೋರ ಹಲ್ಲೆ ನಡೆಸಿದ್ದು, ಕೋಚ್ ಅಟೆಂಡರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಟಿಟಿಇ ಮತ್ತು ಇತರ ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಾನುಷವಾಗಿ ಹಲ್ಲೆ ನಡೆಸಿದ ಬಳಿಕ ಅಪರಿಚಿತ ಪ್ರಯಾಣಿಕ ಖಾನಾಪುರ ರೈಲು ನಿಲ್ದಾಣದ ಬಳಿ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ. ಟಿಟಿಇ ಟಿಕೆಟ್ ತೋರಿಸುವಂತೆ ಕೇಳಿದಾಗ ದಾಳಿಕೋರ ವಾಗ್ವಾದ ನಡೆಸಿದ ಬಳಿಕ ಹಲ್ಲೆ ನಡೆಸಿದ್ದಾನೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಲಾಡಾ ಮಾರ್ಟಿನ್ ಮಾರ್ಬಾನಿಯಾಂಗ್ ತಿಳಿಸಿದ್ದಾರೆ. ಟಿಟಿಇ ಮೇಲಿನ ಹಲ್ಲೆಯನ್ನು ತಡೆಯಲು ಕೋಚ್ ಅಟೆಂಡೆಂಟ್ ಮಧ್ಯಪ್ರವೇಶಿಸಿದಾಗ ಆತನಿಗೂ ಇರಿದು ಹತ್ಯೆ ಮಾಡಿದ್ದಾನೆ. ಮತ್ತಿಬ್ಬರನ್ನು ಗಾಯಗೊಳಿಸಿದ್ದು, ಆತನ ಪತ್ತೆಗೆ ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಕಮಿಷನರ್ ಲಾಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ.