ಲೈಂಗಿಕ ದೌರ್ಜನ್ಯ ಪ್ರಕರಣ-ರೇವಣ್ಣ ಜಾಮೀನು ಅರ್ಜಿ ವಿಚಾರಣೆಯ ತೀರ್ಪಿನ ಆದೇಶ ಮೇ.20ಕ್ಕೆ

ಮಂಗಳೂರು(ಬೆಂಗಳೂರು): ಹೊಳೆನರಸೀಪುರದಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ 42ನೇ ಎಸಿಎಂಎಂ ಕೋರ್ಟ್‌ ಹೆಚ್‌ ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆಯ ತೀರ್ಪಿನ ಆದೇಶವನ್ನು ಮೇ.20ಕ್ಕೆ ಕಾಯ್ದಿರಿಸಿದೆ.

ಎಸ್‌ಐಟಿ ಪರ ವಾದ ಮಂಡಿಸಿದ ಎಸ್‌ಪಿಪಿ ಜಯ್ನಾ ಕೊಠಾರಿ, ಸಂತ್ರಸ್ತೆ ಹೇಳಿಕೆ ಪಡೆದ ಬಳಿಕ ಈ ಪ್ರಕರಣದಲ್ಲಿ ತನಿಖಾಧಿಕಾರಿ ಮನವಿ ಮೇರೆಗೆ ಅತ್ಯಾಚಾರ ವಿಚಾರ ಸೇರಿಸಲಾಗಿದೆ . ಹೀಗಾಗಿ ಸೆಕ್ಷನ್‌ 376 ಬಹಳ ಪ್ರಮುಖವಾಗಿದೆ, ಅತ್ಯಾಚಾರ ಆರೋಪ ದಾಖಲಾದರೆ ಜಾಮೀನು ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ವ್ಯಾಪ್ತಿ ಇಲ್ಲ, ಹಾಗೂ ರೇವಣ್ಣ ಮತ್ತು ಪ್ರಜ್ವಲ್ ಮೇಲಿನ ದೂರನ್ನು ಇಲ್ಲಿ ವಿಭಜಿಸಲು ಬರುವುದಿಲ್ಲ ಹೀಗಾಗಿ ಜಾಮೀನು ಅರ್ಜಿ ವಿಚಾರಣೆಯನ್ನು ಸ್ವೀಕರಿಸಬಾರದು, ಈ ವಿಚಾರಣೆಯನ್ನು ಸೆಷನ್ಸ್‌ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ವಾದ ಮಂಡಿಸಿದ್ದಾರೆ.

ಇನ್ನು ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಿ ವಿ ನಾಗೇಶ್‌, ನಾವು 436ರ ಅಡಿ ಜಾಮೀನು ಕೇಳಿದ್ದೇವೆ, ರೇವಣ್ಣ ವಿರುದ್ಧ ಹಾಕಲಾದ ಸೆಕ್ಷನ್‌ಗಳು ಜಾಮೀನು ನೀಡುವಂತಹ ಅಪರಾಧಗಳೇ, ಹೀಗಾಗಿ ಪ್ರತಿವಾದಿಗಳ ಆಕ್ಷೇಪ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಈ ಪ್ರಕರಣದ ದೂರು ದಾಖಲಿಸುವಲ್ಲಿಯೂ ಲೋಪದೋಷವಿದೆ, ನಿಯಮ ಪಾಲನೆಯಾಗಿಲ್ಲ, ಸಂತ್ರಸ್ತೆ ಹೇಳಿಕೆ ನೋಡಿದರೆ ಅತ್ಯಾಚಾರ ನಡೆದಂತೆ ಕಾಣಿಸಲ್ಲ, ಮೈಕೈ ಮುಟ್ಟಿದರೆ ಅದು ಅತ್ಯಾಚಾರ ಅಲ್ಲ. ಜೊತೆಗೆ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದಾಗ ಸೆಕ್ಷನ್‌ 376 ಬಗ್ಗೆ ಉಲ್ಲೇಖ ಇರಲಿಲ್ಲ ಎಂದು ವಾದಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಮೇ.20ಕ್ಕೆ ಆದೇಶ ಕಾಯ್ದಿರಿಸಿದೆ. ಜೊತೆಗೆ ಮಧ್ಯಂತರ ಜಾಮೀನು ಅವಧಿಯನ್ನು ಮೇ.20ರವರೆಗೆ ಮುಂದುವರೆಸಲಾಗಿದೆ.

LEAVE A REPLY

Please enter your comment!
Please enter your name here