ದೇವರಾಜೇಗೌಡ ಆರೋಪದ ಬೆನ್ನಲ್ಲೇ ಪೆನ್​ಡ್ರೈವ್​ ಗ್ಯಾಂಗ್​ ಎಂದು 4 ಸಚಿವರ ಹೆಸರು ಬಿಚ್ಚಿಟ್ಟ ಜೆಡಿಎಸ್

ಮಂಗಳೂರು(ಬೆಂಗಳೂರು): ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ವಕೀಲ ದೇವರಾಜೇಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ. ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‌. ಹ್ಯಾಂಡಲ್​ ಮಾಡಲು ನಾಲ್ವರು ಸಚಿವರ ಸಮಿತಿ ರಚಿಸಿದ್ದರು. ಅಲ್ಲದೇ ಪೆನ್​ಡ್ರೈವ್​ ಹಂಚಿಕೆ ಮಾಡಿದ್ದು ಕುಮಾರಸ್ವಾಮಿ ಎಂದು ಹೇಳಲು ನನಗೆ 100 ಕೋಟಿ ಆಫರ್​ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಜೆಡಿಎಸ್​ ಟ್ವೀಟ್ ಮಾಡಿದ್ದು, ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದು ನಾಲ್ವರು ಸಚಿವರುಗಳ ಹೆಸರುಗಳನ್ನು ಬಹಿರಂಗಪಡಿಸಿದೆ.

ಎಸ್​ಐಟಿ ವಶದಲ್ಲಿದ್ದುಕೊಂಡೇ ಮಾಧ್ಯಮಗಳ ಮುಂದೆ ಡಿಕೆ ಶಿವಕುಮಾರ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ ಬೆನ್ನಲ್ಲೇ ಈ ಬಗ್ಗೆ ಜೆಡಿಎಸ್ ಟ್ವೀಟ್ ಮಾಡಿದ್ದು, 1.ಡಿಸಿಎಂ ಡಿ.ಕೆ.ಶಿವಕುಮಾರ್, 2.ಕೃಷಿ ಸಚಿವ ಚೆಲುವರಾಯಸ್ವಾಮಿ, 3.ಕಂದಾಯ ಸಚಿವ ಕೃಷ್ಣಭೈರೇಗೌಡ, 4. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ಲಸ್ ಇನ್ನೂ ಒಬ್ಬ ಸಚಿವ ಹಾಗೇ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ. ಇವರೆಲ್ಲರೂ ಹೂಡಿರುವ ಸಂಚು ಏನ್ ಗೊತ್ತಾ? ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವುದು. ಈ ಸಂಚು ಸಾಕಾರಗೊಳಿಸಲು ಸಿಡಿ ಶಿವಕುಮಾರ್ ಸಾಹೇಬರು ವಕೀಲರಾದ ದೇವರಾಜೇಗೌಡರಿಗೆ ಆಫರ್ ಮಾಡಿದ ಮೊತ್ತ ಬರೋಬ್ಬರಿ 100 ಕೋಟಿ ಎಂದು ಬರೆದುಕೊಂಡಿದೆ.

ಈ ಹಿಂದೆ ಪ್ರಕರಣ ಸಂಬಂಧ ವಕೀಲ ದೇವರಾಜೇಗೌಡ ಅವರು ಆರಂಭದಲ್ಲೇ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಅಲ್ಲದೇ ವಾಯ್ಸ್ ರೆಕಾರ್ಡ್ ಬಿಡುಗಡೆ ಮಾಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಅಲ್ಲದೇ ಈ ಸಂಬಂಧ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಡಿಕೆ ಶಿವಕುಮಾರ್ ವಿರುದ್ಧ ಮುಗಿಬಿದ್ದಿದ್ದರು. ಎಸ್​ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ. ಹೀಗಾಗಿ ಪೆನ್​ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೇವರಾಜೇಗೌಡ ಅವರು ಡಿಕೆ ಶಿವಕುಮಾರ್ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ಆರೋಪ-ಪ್ರತ್ಯಾರೋಪಗಳು ಜೋರಾಗಲಿವೆ.

ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದ್ದರು. ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರೀಯಾಂಕ ಖರ್ಗೆ ಮತ್ತು ಇನ್ನೊಬ್ಬ ಸಚಿವರು. ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದರು ಎಂದು ದೇವರಾಜೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್​ 100 ಕೋಟಿ ರೂ. ಆಫರ್ ಕೊಟ್ಟಿದ್ದಾರೆ. ಮೊದಲಿಗೆ ಡಿಕೆ ಶಿವಕುಮಾರ್ ಅವರು ನನ್ನನ್ನು ಕರೆಸಿ ಮಾತನಾಡಿದ್ದರು. ಪೆನ್‌ಡ್ರೈವ್‌ ಅನ್ನು ಕುಮಾರಸ್ವಾಮಿ ಹಂಚಿದ್ರು ಎಂದು ಹೇಳು ನಿನಗೆ ಸಮಸ್ಯೆ ಆಗಲ್ಲ ಸೆಕ್ಯೂರ್ ಮಾಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ದೊಡ್ಡಮಟ್ಟದ 100 ಕೋಟಿ ಹಣದ ಆಫರ್ ಕೊಟ್ಟರು. ಈ ಪೈಕಿ ಐದು ಕೋಟಿ ರೂಪಾಯಿ ಅಡ್ವಾನ್ಸ್ ದುಡ್ಡನ್ನ ಬೌರಿಂಗ್ ಕ್ಲಬ್‌ನ 110 ರೂಂಗೆ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ. ಚನ್ನರಾಯಪಟ್ಟಣ ಮಾಜಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಅವರನ್ನು ಐದು ಕೋಟಿ ಕ್ಯಾಶ್ ಕೊಟ್ಟು ಸಂಧಾನಕ್ಕೆ ಕಳುಹಿಸಿದ್ದರು. ಆದ್ರೆ, ಇದಕ್ಕೆ ನಾನು ಒಪ್ಪದೇ ಇದ್ದಾಗ ಈಗಾಗಲೇ ದೊಡ್ಡ ಹಗರಣ ಆಗಿರುವುದರಿಂದ ಮೋದಿಗೆ, ಬಿಜೆಪಿಗೆ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಸಂಚು ಮಾಡಿದ್ರು ಎಂದಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://x.com/i/status/1791476656143814874

 

LEAVE A REPLY

Please enter your comment!
Please enter your name here