ಮಂಗಳೂರು : ಮಹಿಳೆಯೊಬ್ಬರ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯ ಕಾರು ಚಾಲನೆಯಿಂದಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಪಡೀಲ್ ನಲ್ಲಿ ನಡೆದಿದೆ.
ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆ ಬಳಿ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡು ಯುವಕ ಮೃತಪಟ್ಟಿದ್ದಾರೆ. ನಮ್ಮ ಕುಡ್ಲ – ವಿಜಾರ್ಡ್ ಕೇಬಲ್ ನೆಟ್ವರ್ಕ್ ನಲ್ಲಿ ಟೆಕ್ನಿಶಿಯನ್ ಆಗಿದ್ದ, ತೊಕ್ಕೊಟ್ಟು ಬಳಿಯ ಕಲ್ಲಾಪು ನಿವಾಸಿ ಹರೀಶ್ (43) ಮೃತ ವ್ಯಕ್ತಿ. ಕಾರು ಚಲಾಯಿಸುತ್ತಿದ್ದ ಮಹಿಳೆ ನಿಯಂತ್ರಣ ಕಳೆದುಕೊಂಡಿದ್ದು, ಬ್ರೇಕ್ ಬದಲು ಎಕ್ಸಲೇಟರ್ ತುಳಿದಿದ್ದರಿಂದ ಅಮಾಯಕ ವ್ಯಕ್ತಿ ಉಸಿರು ಚೆಲ್ಲುವಂತಾಗಿದೆ. ಬೈಕ್ ನಜ್ಜುಗುಜ್ಜಾಗಿದ್ದು ಪಕ್ಕದ ಚರಂಡಿಗೆ ಬಿದ್ದಿದೆ. ಅಪಘಾತದ ತೀವ್ರತೆಗೆ ರಸ್ತೆಯಿಂದ ದೂರಕ್ಕೆ ಎಸೆಯಲ್ಪಟ್ಟ ಹರೀಶ್ ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ತಕ್ಷಣ ಹರೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೆ ಅವರ ಮಿದುಳು ನಿಷ್ಕ್ರೀಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ಹರೀಶ್ ಪತ್ನಿ, ಇಬ್ಬರು ಗಂಡು ಮಕ್ಕಳು, ತಾಯಿ, ಸಹೋದರ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.