ಮಂಗಳೂರು: ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 14 ವರ್ಷ. 2010ರ ಮೇ 22ರ ಬೆಳಗ್ಗೆ 6.20ಕ್ಕೆ ದುಬಾೖಯಿಂದ ಆಗಮಿಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದ ಸಮೀಪದ ಕೆಂಜಾರಿನಲ್ಲಿ ಅಪಘಾತಕ್ಕೀಡಾಗಿ 158 ಮಂದಿ ಸಜೀವ ದಹನಗೊಂಡಿದ್ದರು. ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಕೂಳೂರು ತಣ್ಣೀರು ಬಾವಿ ರಸ್ತೆ ಬಳಿ ಇರುವ ಪಾರ್ಕ್‌ನಲ್ಲಿ ಜಿಲ್ಲಾಡಳಿತದ ವತಿಯಿಂದ ಇಂದು (ಮೇ 22) ಬೆಳಗ್ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಂದು ವಿಮಾನ ಲ್ಯಾಂಡ್ ಆಗುವ ವೇಳೆ ರನ್‌ವೇಯಲ್ಲಿ ನಿಲ್ಲದೆ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿ ಹೊಡೆದು ವಿದ್ಯುತ್ ತಂತಿಗಳಿಗೆ ಬಡಿಯುತ್ತಾ ಬಳಿಕ ಕೆಂಜಾರಿನಲ್ಲಿ ಕೆಳಕ್ಕೆ ಉರುಳಿ ಸ್ಫೋಟಗೊಂಡಿತ್ತು. ಇದಕ್ಕೂ ಮೊದಲು ಮರಕ್ಕೆ ಬಡಿದು ವಿಮಾನದ ಬಾಗಿಲು ತೆರೆದುಕೊಂಡಾಗ 8 ಮಂದಿ ಹೊರಗೆ ಎಸೆಯಲ್ಪಟ್ಟಿದ್ದರು. ಓರ್ವ ಯುವತಿ ಮರಗಳ ರೆಂಬೆಗಳಲ್ಲಿ ಸಿಲುಕಿಕೊಂಡಿದ್ದಳು. ವಿಮಾನದಲ್ಲಿದ್ದ 166 ಮಂದಿ ಪ್ರಯಾಣಿಕರಲ್ಲಿ ಎಲ್ಲಾ 8 ಸಿಬಂದಿ ಸಹಿತ 158 ಮಂದಿ ಸಜೀವ ದಹನಗೊಂಡಿದ್ದರು. ವಿಮಾನದ ಬ್ಲ್ಯಾಕ್ ಬಾಕ್ಸ್‌ನ ವಿಶ್ಲೇಷಣೆಯ ಪ್ರಕಾರ ವಿಮಾನದ ಮುಖ್ಯ ಪೈಲಟ್ ಕ್ಯಾ| ಗ್ಲುಸಿಕಾ ಅವರು ಮಾಡಿದ ತಪ್ಪಿನಿಂದಾಗಿ ದುರಂತ ಸಂಭವಿಸಿತ್ತು. ಸಹ ಪೈಲಟ್ ಕ್ಯಾ| ಅಹ್ಲುವಾಲಿಯಾ ಅವರ ಎಚ್ಚರಿಕೆಯನ್ನು ಪರಿಗಣಿಸದೆ ಕ್ಯಾ| ಗ್ಲುಸಿಕಾ ಅವರು ವಿಮಾನವನ್ನು ಇಳಿಸಲು ನಿರ್ಧರಿಸಿದ್ದು ಬ್ಲ್ಯಾಕ್ ಬಾಕ್ಸ್ ವಿಶ್ಲೇಷಣೆಯಲ್ಲಿ ಪತ್ತೆಯಾಗಿತ್ತು.