ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಜಮೀನು ಸ್ವಾಧೀನ-ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಂಗಳೂರು(ಬೆಂಗಳೂರು): ‘ಸಾರ್ವಜನಿಕ ಉದ್ದೇಶ’ ಗಳಿಗಾಗಿ ರಾಜ್ಯ ಸರಕಾರ ಏಕಪಕ್ಷೀಯವಾಗಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕೋಲ್ಕತ್ತಾ ಮುನ್ಸಿಪಾಲಿಟಿ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಖಾಸಗಿ ಭೂ ಸ್ವಾಧೀನಕ್ಕೆ ಸರಕಾರಗಳು ಏಳು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿದೆ.   ಜತೆಗೆ, ಸಾರ್ವಜನಿಕ ಉದ್ದೇಶದ ಹೆಸರಿನಲ್ಲಿ ಖಾಸಗಿಯವರ ಆಸ್ತಿ ಹಕ್ಕನ್ನು ಮೊಟಕುಗೊಳಿಸಲಾಗದು. ಆಸ್ತಿಯ ಹಕ್ಕು ಸಾಂವಿಧಾನಿಕ ಹಕ್ಕು ಆಗಿರುವುದರಿಂದ ಅದನ್ನು ಕಾನೂನು ರೀತಿಯಲ್ಲಿ ರಕ್ಷಿಸಬೇಕಿದೆ. ಆ ಹಕ್ಕನ್ನು ಮಾನವ ಹಕ್ಕು ಎಂದೂ ವಿಶ್ಲೇಷಿಸಬಹುದಾಗಿದೆ” ಎಂದು ನ್ಯಾಯಪೀಠ ಹೇಳಿದೆ. ಸಾಮಾನ್ಯವಾಗಿ ಯಾವುದೇ ಸ್ವಾಧೀನ ಪ್ರಕ್ರಿಯೆ ಸಿಂಧುವಾಗಬೇಕಾದರೆ, ಸ್ವಾಧೀನ ಪ್ರಕ್ರಿಯೆ ವೇಳೆ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿರಬೇಕು. ಸೂಕ್ತ ಹಾಗೂ ನ್ಯಾಯಯುತ ಪರಿಹಾರ ದೊರಕಿಸಿಕೊಡಬೇಕು. ಸರಿಯಾದ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದಾದರೆ ಅದು ಅಸಂವಿಧಾನಿಕ ವಾಗುತ್ತದೆ ಮತ್ತು ವ್ಯಕ್ತಿಯ ಆಸ್ತಿಯ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಕೊಲ್ಕತ್ತಾ ಮಹಾನಗರ ಪಾಲಿಕೆಯು ಮಾಡಿಕೊಂಡಿದ್ದ ಖಾಸಗಿ ಸ್ವತ್ತಿನ ಭೂ ಸ್ವಾಧೀನವನ್ನು ಕೊಲ್ಕತ್ತಾ ಹೈಕೋರ್ಟ್ ಎತ್ತಿ ಹಿಡಿದಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ,ಭೂ ಮಾಲೀಕರಿಗೆ 60 ದಿನಗಳಲ್ಲಿ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪಾಲಿಕೆಗೆ ಆದೇಶಿಸಿದೆ. ಸಂವಿಧಾನದ 44 ನೇ ತಿದ್ದುಪಡಿಯಲ್ಲಿ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ತೆಗೆದಿದ್ದರೂ ಕಲಂ 300 ಎ ಸೇರ್ಪಡೆ ಮಾಡಿ ಅದರಲ್ಲಿ ಯಾವುದೇ ವ್ಯಕ್ತಿಯನ್ನು ತನ್ನ ಆಸ್ತಿಯಿಂದ ವಂಚಿಸಲಾಗದು. ಅದರಡಿ ವ್ಯಕ್ತಿಯ ಹಕ್ಕನ್ನೂ ರಕ್ಷಿಸಬೇಕಾಗುತ್ತದೆ. ಹಾಗಾಗಿ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವಾಗ ರಾಜ್ಯ ಸರಕಾರಗಳು ಕೆಲವೊಂದು ಅಂಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ನ್ಯಾಯಪೀಠ ಹೇಳಿದೆ. ಪರಿಹಾರ ಪಾವತಿಯಿಂದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಬದಲಿಗೆ ಭೂಮಿಯನ್ನು ಭೌತಿಕವಾಗಿ ವಶಕ್ಕೆ ತೆಗೆದುಕೊಳ್ಳಬೇಕು. ಒಂದು ವೇಳೆ ವಶಕ್ಕೆ ಪಡೆದಿಲ್ಲವಾದರೆ ಆಗ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಏಳು ಅಂಶಗಳ ಮಾರ್ಗಸೂಚಿ

  • ಯಾವ ವ್ಯಕ್ತಿಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆಯೋ ಅಂತಹವರಿಗೆ ನೋಟಿಸ್ ನೀಡುವುದು ಸರಕಾರದ ಮೊದಲನೇ ಕರ್ತವ್ಯ.
  • ಪ್ರಜೆಗಳ ಹಕ್ಕನ್ನು ಆಲಿಸಬೇಕು ಅಥವಾ ಸ್ವಾಧೀನಕ್ಕೆ ಅವರು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಬೇಕು.
  • ಆನಂತರ ಪರಿಶೀಲಿಸಿ ಸ್ವಾಧೀನ ನಿರ್ಧಾರ ಕೈಗೊಳ್ಳಬೇಕು. ಆ ನಿರ್ಧಾರವನ್ನು ಸಂಬಂಧಿಸಿದ ವ್ಯಕ್ತಿಗೆ ತಿಳಿಸಬೇಕು.
  • ಭೂ ಸ್ವಾಧೀನ ವಿಶೇಷವಾಗಿ ಸಾರ್ವಜನಿಕ ಉದ್ದೇಶದಿಂದ ಕೂಡಿದೆ ಎಂಬುದನ್ನು ಖಾಸಗಿ ವ್ಯಕ್ತಿಗೆ ಮನವರಿಕೆ ಮಾಡಿಕೊಡುವುದು ಸರಕಾರದ ಜವಾಬ್ದಾರಿ.
  • ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು.
  • ಭೂ ಸ್ವಾಧೀನ ಪ್ರಕ್ರಿಯೆಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಪರಿಣಾಮಕಾರಿ ಮತ್ತು ಪಾರದರ್ಶಕವಾಗಿ ಕೈಗೊಳ್ಳುವುದು ಸರಕಾರದ ಹೊಣೆ.
  • ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹಕ್ಕುಗಳನ್ನು ನಿರ್ಧರಿಸಬೇಕು

LEAVE A REPLY

Please enter your comment!
Please enter your name here