ಮಂಗಳೂರು: ಭಾರೀ ಗಾಳಿ ಮಳೆಗೆ ರಸ್ತೆಯಲ್ಲಿದ್ದ ವಾಹನಗಳ ಮೇಲೆ ಬೃಹತ್ ಆಲದ ಮರದ ಕೊಂಬೆಯೊಂದು ಬಿದ್ದಿದೆ. ಪರಿಣಾಮ ಕೆಲ ವಾಹನಗಳು ಜಖಂಗೊಂಡ ಘಟನೆ ಮಂಗಳೂರು ಕೋರ್ಟ್ ರಸ್ತೆ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಬೃಹತ್ ಆಲದ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ರಸ್ತೆಗೆ ಅಡ್ಡಲಾಗಿ ವಾಹನಗಳ ಮೇಲೆ ಮರ ಬಿದ್ದ ಪರಿಣಾಮ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆಯ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಹೊಯ್ಸಳ ಪೂರ್ವ ವಿಭಾಗದ ಪೊಲೀಸರು ತೆರಳಿದ್ದಾರೆ. ವಿದ್ಯುತ್ ತಂತಿಗಳ ಮೇಲೂ ಕೊಂಬೆ ಬಿದ್ದ ಪರಿಣಾಮ ಹಾನಿಗೀಡಾಗಿತ್ತು. ಹಾಗಾಗಿ, ಕೂಡಲೇ ಮೆಸ್ಕಾಂ ಸಿಬ್ಬಂದಿಯನ್ನು ಕರೆಸಿ, ಮರವನ್ನು ತೆರವುಗೊಳಿಸಲಾಗಿದೆ. ಘಟನೆಯಿಂದ ಎರಡು ವಾಹನಗಳಿಗೆ ಹಾನಿಯುಂಟಾಗಿದೆ ಎಂದು ಹೇಳಿದ್ದಾರೆ.