ಮಂಗಳೂರು(ಪುಣೆ): ಕಾರು ಅಪಘಾತಕ್ಕೂ ಮುನ್ನ ಅಪ್ರಾಪ್ತ ಬಾಲಕ ಪಬ್ನಲ್ಲಿ 90 ನಿಮಿಷಗಳಲ್ಲಿ 48 ಸಾವಿರ ರೂ. ಖರ್ಚು ಮಾಡಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಪುಣೆಯಲ್ಲಿ ಅಪ್ರಾಪ್ತನೊಬ್ಬ ಕುಡಿದ ಮತ್ತಿನಲ್ಲಿ ದುಬಾರಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಅವರನ್ನು ಬಂಧಿಸಿ 15ಗಂಟೆಗಳಲ್ಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.
ಅಪ್ರಾಪ್ತ ಬಾಲಕರಿಗೆ ಮದ್ಯ ನೀಡಿದ ಆರೋಪದ ಮೇಲೆ ಪಬ್ ಹಾಗೂ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಾಗಿದೆ. ಬಾಲಕ ಸ್ನೇಹಿತರೊಂದಿಗೆ ರಾತ್ರಿ 9.30 ರಿಂದ 10.30ರ ನಡುವೆ ಮದ್ಯ ಸೇವನೆ ಮಾಡಿದ್ದಾನೆ. ಬಾಲಕನಿಗೆ ಜಾಮೀನು ನೀಡಿದ ಬಳಿಕ 15 ದಿನಗಳ ಕಾಲ ಟ್ರಾಫಿಕ್ ಪೊಲೀಸರೊಂದಿಗೆ ಕೆಲಸ ಮಾಡಬೇಕು, ಅಪಘಾತಕ್ಕೆ ಸಂಬಂಧಿಸಿದಂತೆ 300 ಪುಟಗಳ ಪ್ರಬಂಧ ಬರೆಯಬೇಕು ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆಯಲ್ಲಿ ಪೋಶ್ ಕಾರು ಡಿಕ್ಕಿ ಹೊಡೆದು ಇಬ್ಬರು ಮೋಟಾರ್‌ಬೈಕ್ ಸವಾರರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಯಾಗಿರುವ ಅಪ್ರಾಪ್ತನಿಗೆ ಉತ್ತಮವಾದ ರೀತಿಯಲ್ಲಿ ಉಪಚರಿಸಿದ್ದರು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ ಅತುಲ್ ಲೊಂಧೆ, ಆರೋಪಿಗೆ ಬಂಧನದಲ್ಲಿದ್ದಾಗ ಆತನಿಗೆ “ಪಿಜ್ಜಾ ಮತ್ತು ಬರ್ಗರ್ ನೀಡಲಾಯಿತು ಎಂದು ಆರೋಪಿಸಿ, ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ಪೊಲೀಸರು ಪ್ರಕರಣದ ನಿರ್ವಹಣೆಯ ಮೇಲೆ ರಾಜಕೀಯ ಒತ್ತಡ ಪ್ರಭಾವ ಇದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.