ಮಂಗಳೂರು(ಬೆಂಗಳೂರು): ‘ಸ್ಮೋಕಿ ಪಾನ್’ತಿಂದು 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ ಉಂಟಾಗಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಅಪಾಯಕಾರಿಯಲ್ಲದ ದ್ರವ ಸಾರಜನಕ ಹಾಕಲಾಗಿದ್ದ ‘ಸ್ಮೋಕಿ ಪಾನ್’ ಅನ್ನು ಬಾಲಕಿ ಸೇವಿಸಿರಬಹುದು ಎಂದು ಹೇಳಲಾಗಿದೆ. ಶಸ್ತ್ರಚಿಕಿತ್ಸೆ ಕೈಗೊಂಡ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಬಾಲಕಿಯ ಗುರುತನ್ನು ಗೋಪ್ಯವಾಗಿ ಇಟ್ಟಿದ್ದು, ಮದುವೆ ಸಮಾರಂಭದಲ್ಲಿ ಆಕೆ ಸ್ಮೋಕಿ ಪಾನ್ ಸೇವಿಸಿದ ಬಳಿಕ ಅನಾರೋಗ್ಯ ಕಂಡುಬಂದಿದೆ ಎಂದು ಆಸ್ಪತ್ರೆ ತಿಳಿಸಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿನ ಹೊಟ್ಟೆಯಲ್ಲಿ ರಂಧ್ರವಿರುವುದು ಕಂಡುಬಂದಿತು. ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಅದರಂತೆ, ಶಸ್ತ್ರಚಿಕಿತ್ಸೆ ನಡೆಸಿ ಹೆಚ್ಚಿನ ಅಪಾಯ ಆಗದಂತೆ ತಡೆದಿದ್ದೇವೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಬಾಲಕಿಗೆ ಎಕ್ಸ್ಪ್ಲೊರೇಟರಿ ಲ್ಯಾಪರೊಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಹೊಟ್ಟೆಯಲ್ಲಿ 4×5 ಸೆ.ಮೀ ಉದ್ದದ ಅನಾರೋಗ್ಯಕರ ವಸ್ತು ಅಂಟಿಕೊಂಡಿರುವುದು ಪತ್ತೆಯಾಗಿತ್ತು. ಆ ಭಾಗವನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಲಾಗಿದ್ದು, ಸರ್ಜರಿ ಬಳಿಕ ಬಾಲಕಿ ಎರಡು ವಾರ ಐಸಿಯೂನಲ್ಲಿ ಇದ್ದಳು. 6 ದಿನಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.