ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಬಂಧನಕ್ಕೆ ಪೊಲೀಸರ ದಂಡು- ಕಾರ್ಯಕರ್ತರ ಪ್ರತಿಭಟನೆ:ಬಂಧಿಸದೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಿ ತೆರಳಿದ ಪೊಲೀಸರು-ರಾತ್ರಿ ವೇಳೆ ವಿಚಾರಣೆಗೆ ಠಾಣೆಗೆ ಹಾಜರಾದ ಹರೀಶ್ ಪೂಂಜ-ಬಂಧನ ತೋರಿಸಿ ವಿಚಾರಣೆ, ಸ್ಟೇಷನ್ ಬೇಲ್ ನಲ್ಲಿ ಬಿಡುಗಡೆ

ಮಂಗಳೂರು(ಬೆಳ್ತಂಗಡಿ):ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ತಂಡ ಅವರ ಮನೆಗೆ ತೆರಳಿದ್ದ ವೇಳೆ ಭಾರೀ ಹೈಡ್ರಾಮವೇ ನಡೆದಿದೆ. ಮೇ 22ರ ಬೆಳಗ್ಗೆಯಿಂದ ರಾತ್ರಿಯವರೆಗೂ ಬಂಧನಕ್ಕೆ ಪ್ರಯತ್ನಿಸಿದ ಪೊಲೀಸರು, ಅಂತಿಮವಾಗಿ ಕಾನೂನಿನ ಅಂಶಗಳು ಹಾಗೂ ಪೂಂಜರಿಗಿದ್ದ ಕಾರ್ಯಕರ್ತರ ಅಪಾರ ಬೆಂಬಲವನ್ನು ಕಂಡು ಅವರನ್ನು ಬಂಧಿಸದೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿ ತೆರಳಿದ್ದಾರೆ. ಬಳಿಕದ ಬೆಳವಣಿಗೆಯಲ್ಲಿ ಶಾಸಕ ಹರೀಶ್ ಪೂಂಜರವರು ಮುಖಂಡರು ಮತ್ತು ವಕೀಲರೊಂದಿಗೆ ರಾತ್ರಿ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದರು. ಅವರ ಬಂಧನ ತೋರಿಸಿ, ವಿಚಾರಣೆ ನಡೆಸಿ ಸ್ಟೇಷನ್ ಬೇಲ್ ನಲ್ಲಿ ಬಿಡುಗಡೆಗೊಳಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಮುರಳೀಕೃಷ್ಣ ಹಸಂತಡ್ಕ ಸೇರಿದಂತೆ ಸಾವಿರಾರು ಮಂದಿ ಪೂಂಜ ಅವರ ಮನೆಯಲ್ಲಿ ಸೇರಿದ್ದರು.

ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಸುಬ್ಬಾಪೂರ ಮಠ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಮತ್ತು ಶಾಸಕ ಹರೀಶ್ ಪೂಂಜ ಅವರ ಪರ ವಕೀಲರಾದ ಶಂಭು ಶರ್ಮ, ಸುಬ್ರಹ್ಮಣ್ಯ ಕುಮಾರ್ ಅಗರ್ತ ತಂಡದ ನಡುವೆ ಹರೀಶ್ ಪೂಂಜ ಅವರ ಗರ್ಡಾಡಿಯ ಮಿಥಿಲಾ ನಿವಾಸದಲ್ಲಿ ಭಾರೀ ವಾದ ಪ್ರತಿವಾದ ನಡೆದು ಕೊನೆಗೆ ಡಿವೈಎಸ್‌ಪಿ ವಿಜಯಪ್ರಸಾದ್ ಆಗಮಿಸಿ ಮಾತುಕತೆ ನಡೆಸಿದರೂ ಫಲಪ್ರದವೆನಿಸಲಿಲ್ಲ. ಕೊನೆಗೆ, ಎರಡೂ ಪ್ರಕರಣಗಳಲ್ಲಿ ಪೊಲೀಸರು ನೋಟಿಸ್ ನೀಡಿದ ಬಳಿಕ ಶಾಸಕ ಹರೀಶ್ ಪೂಂಜ 5 ದಿನಗಳ ಕಾಲಾವಕಾಶ ಕೇಳಿದರು. ಇದಾದ ಬಳಿಕ ಮನೆಯ ಕಾಂಪೌಡ್‌ನಿಂದ ಹೊರಗಡೆ ಹೋಗಿದ್ದ ಪೊಲೀಸರು ಮತ್ತೆ ಬಂಧನಕ್ಕೆ ಆಗಮಿಸಿದರೂ, ವಕೀಲರು ಮುಂದಿಟ್ಟ ಕಾನೂನಿನ ಅಂಶಗಳು ಹಾಗೂ ಕಾರ್ಯಕರ್ತರ ಆಕ್ರೋಶವನ್ನು ಕಂಡು ಬಂಧಿಸದೆ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಹಿರಿಯ ಅಧಿಕಾರಿಗಳು ಶಾಸಕರನ್ನು ಬಂಧಿಸುವುದಿಲ್ಲ ಎಂದು ತಿಳಿಸಿ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿ ಸ್ಥಳದಿಂದ ತೆರಳಿದರು. ಮೇ23ರಂದು ಠಾಣೆಗೆ ಹಾಜರಾಗಲು ನಿರ್ಧರಿಸಿದ್ದ ಪೂಂಜರವರು ಮೇ22ರಂದು ರಾತ್ರಿ 9.30ಕ್ಕೆ ವಿಚಾರಣೆಗಾಗಿ ಠಾಣೆಗೆ ಹಾಜರಾದರು. ಅವರ ಬಂಧನ ತೋರಿಸಿ ವಿಚಾರಣೆ ನಡೆಸಿ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಎಸ್.ಪಿ.ರಿಷ್ಯಂತ್ ಸಿ.ಬಿ.ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಮೇ 18ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಕ್ರಮ ಗಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿತನಾಗಿರುವ ಗುರುವಾಯನಕೆರೆಯ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ ಅವಾಚ್ಯವಾಗಿ ಪೊಲೀಸ್ ಸ್ಟೇಷನ್ ನಿಮ್ಮ ಅಪ್ಪಂದ ಜಾಗ್ರತೆ ಎಂದು ಬೈದು ಬೆದರಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಇಲಾಖೆ, ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ದುರ್ವರ್ತನೆ ತೋರಿದ ಆರೋಪ (ಸೆಕ್ಷನ್ 353 ಮತ್ತು 504 ಐಪಿಸಿ) ಹಾಗೂ ಮೇ 20ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನುಬಾಹಿರವಾಗಿ ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗದಲ್ಲಿ ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿ, ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ ಎಂದೂ, ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದೂ ಬೆದರಿಸಿ ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ, ಇತರ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಜೀವ ಬೆದರಿಕೆ ಒಡ್ಡಿ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿದ ಆರೋಪ (ಕಲಂ 143, 147, 341, 504, 506 ಜೊತೆಗೆ 149 ಐ.ಪಿ.ಸಿ)ದಡಿ ಎರಡು ಪ್ರತ್ಯೇಕ ಕೇಸ್‌ಗೆ ಒಳಗಾಗಿರುವ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಬೆಳ್ತಂಗಡಿ ಠಾಣೆಯ ಇನ್ಸ್ಪೆಕ್ಟರ್ ಬಿ.ಜಿ.ಸುಬ್ಬಾಪೂರ್ ಮಠ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಮೇ 22ರಂದು ಬೆಳಗ್ಗೆ ಹರೀಶ್ ಪೂಂಜ ಅವರ ಗರ್ಡಾಡಿಯ ಮಿಥಿಲಾ ನಿವಾಸಕ್ಕೆ ತೆರಳಿದ್ದ ವೇಳೆ ಈ ಹೈಡ್ರಾಮ ನಡೆದಿದೆ.

ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಸುಬ್ಬಾಪೂರ್ ಮಠ್, ಎಸ್.ಐ. ಚಂದ್ರಶೇಖರ್ ಮತ್ತು ವೇಣೂರು ಪೊಲೀಸ್ ಠಾಣಾ ಎಸ್.ಐ. ಶ್ರೀಶೈಲ ಅವರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಹರೀಶ್ ಪೂಂಜ ಅವರನ್ನು ಬಂಧಿಸಲು ಮುಂದಾದ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ಶಾಸಕರನ್ನು ಪೊಲೀಸರು ಬಂಧಿಸುತ್ತಾರಂತೆ ಎಂದು ಸುದ್ದಿ ಹರಡುತ್ತಿದ್ದಂತೆಯೇ ತಾಲೂಕಿನ ವಿವಿಧೆಡೆಯಿಂದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹರೀಶ್ ಪೂಂಜ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಶಾಸಕರ ನಿವಾಸದಿಂದ ನೇರಪ್ರಸಾರ ಮಾಡುತ್ತಿದ್ದ ಸುದ್ದಿ ನ್ಯೂಸ್ ಚಾನೆಲ್ ಮೂಲಕ ಮಾತನಾಡಿದ ಹಲವು ಮುಖಂಡರು ಮತ್ತು ಕಾರ್ಯಕರ್ತರು, ಹರೀಶ್ ಪೂಂಜ ಅವರನ್ನು ಬಂಧಿಸಲು ಮುಂದಾಗಿರುವ ಪೊಲೀಸರ ಕ್ರಮವನ್ನು ವಿರೋಧಿಸಿದರಲ್ಲದೆ ಕಾಂಗ್ರೆಸ್‌ನವರು ದಬ್ಬಾಳಿಕೆಯ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಹರೀಶ್ ಪೂಂಜ ಅವರು ತಮ್ಮ ಮನೆಯೊಳಗಿದ್ದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಮಂಡಲ ಬಿಜೆಪಿ ಅಧ್ಯಕ್ಷ ಶ್ರೀನಿವಾಸ ರಾವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪೂವಾಜೆ ಕುಶಾಲಪ್ಪ ಗೌಡ, ಬಿಎಂಎಸ್ ಜಿಲ್ಲಾಧ್ಯಕ್ಷ ವಕೀಲ ಅನಿಲ್ ಕುಮಾರ್ ಯು. ಸಹಿತ ಹಲವಾರು ಮಂದಿ ಶಾಸಕ ಹರೀಶ್ ಪೂಂಜ ಅವರ ಪರ ನಿಂತು ಪೊಲೀಸರೊಂದಿಗೆ ಮಾತುಕತೆ ನಡೆಸಿದರು.

ಪೊಲೀಸ್ ಅಧಿಕಾರಿಗಳು ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಮುಂದಾದಾಗ ಅವರ ಪರ ವಕೀಲರಾದ ಮಂಗಳೂರಿನ ಶಂಭು ಶರ್ಮ, ಅಜಯ್ ಸುವರ್ಣ, ಬೆಳ್ತಂಗಡಿಯ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ಯತೀಶ್ ಅವರು ಕಾನೂನು ಅಂಶಗಳನ್ನು ಉಲ್ಲೇಖಿಸಿ, ಬಂಧನಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ದ.ಕ. ಕ್ಷೇತ್ರದ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅವರೊಂದಿಗೆ ಡಿವೈಎಸ್‌ಪಿ ವಿಜಯಪ್ರಸಾದ್ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಅರೆಸ್ಟ್ ಮೆಮೋ ತರಲೇಬೇಕು, ಲೀಗಲ್ ಆಗಿ ಏನು ಆಗುತ್ತದೆಯೋ ನೋಡೋಣ ಎಂದು ವಕೀಲರು ಪಟ್ಟು ಹಿಡಿದರು.ಈ ಸಂದರ್ಭದಲ್ಲಿ ಮನೆಯಿಂದ ಹೊರಬಂದ ಡಿವೈಎಸ್‌ಪಿ ವಿಜಯಪ್ರಸಾದ್ ಅವರು ಇನ್ಸ್ಪೆಕ್ಟರ್ ಜತೆ ಮಾತುಕತೆ ನಡೆಸಿದರು. ಹೊರಗಡೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಈ ವೇಳೆ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

5 ದಿನಗಳ ಕಾಲಾವಕಾಶ ಕೋರಿಕೆ: ಶಾಸಕ ಹರೀಶ್ ಪೂಂಜ ಅವರ ವಿರುದ್ಧ ದಾಖಲಾಗಿರುವ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ನೋಟಿಸ್‌ಗಳನ್ನು ನೀಡಿರುವ ಮಾಹಿತಿ ಲಭಿಸಿದೆ. ಒಂದು ನೋಟಿಸನ್ನು ಬೆಳಗ್ಗೆಯೇ ನೀಡಿದ್ದರು. ಇನ್ನೊಂದು ನೋಟಿಸ್ ಸಂಜೆ ನೀಡಿದ್ದಾರೆ. ಇದಕ್ಕೆ ಶಾಸಕರು, 5 ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ಸ್ಥಳದಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರಿಗೆ ತಿಳಿಸಿದರು.

ರಾತ್ರಿ ವೇಳೆ ಪೊಲೀಸ್ ಠಾಣೆಗೆ ಹಾಜರಾದ ಹರೀಶ್ ಪೂಂಜ: ಪೊಲೀಸ್ ಅಧಿಕಾರಿಗಳಿಂದ ವಿಚಾರಣೆಗೆ ಹಾಜರಾಗಲು ನೊಟೀಸ್ ಪಡೆದಿದ್ದ ಶಾಸಕ ಹರೀಶ್ ಪೂಂಜ ಅವರು ರಾತ್ರಿ 9.30ರ ವೇಳೆಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಉಳೇಪಾಡಿಗುತ್ತು, ಭಾಗೀರಥಿ ಮುರುಳ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಕೀಲರಾದ ಶಂಭು ಶರ್ಮ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಅನಿಲ್ ಕುಮಾರ್ ಯು. ಮತ್ತು ಬೆಳ್ತಂಗಡಿಯ ಬಿಜೆಪಿ ಮುಖಂಡರೊದಿಗೆ ಠಾಣೆಗೆ ಹಾಜರಾದ ಹರೀಶ್ ಪೂಂಜ ಅವರು ಡಿವೈಎಸ್ಪಿ ವಿಜಯಪ್ರಸಾದ್ ಮತ್ತು ಇನ್ಸ್ಪೆಕ್ಟರ್ ಬಿ.ಜಿ.ಸುಬ್ರಾಪುರಮಠ್ ಎದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ರಾತ್ರಿಯಾದರೂ ತನ್ನ ಮನೆಯ ಬಳಿಯಿಂದ ಪೊಲೀಸ್ ಜೀಪು ತೆರಳದೇ ಇದ್ದ ಕಾರಣ ಠಾಣೆಗೆ ಹೋಗಬೇಕೇ ಬೇಡವೇ ಎಂದು ಜಿಜ್ಞಾಸೆಯಲ್ಲಿದ್ದ ಪೂಂಜ ಅವರು ಯಾವ ಕಾರಣಕ್ಕೆ ಮನೆಯ ಹತ್ತಿರ ಪೊಲೀಸ್ ಜೀಪು ಇರಿಸಲಾಗಿದೆ ಎಂದು ಜಿಜ್ಞಾಸೆಗೊಳಗಾಗಿದ್ದರು. ಪೊಲೀಸರು ತನ್ನನ್ನು ವಶಕ್ಕೆ ಪಡೆಯುವ ಉದ್ಧೇಶವೇ, ರಕ್ಷಣೆ ಕೊಡುವ ಕಾರಣವೇ ಅಥವಾ ತನ್ನ ನಡೆಯ ಬಗ್ಗೆ ಮಾಹಿತಿ ಸಂಗ್ರಹವೇ ಎಂದು ವಕೀಲ ಶಂಭು ಶರ್ಮ ಮತ್ತು ನಾಯಕರೊಂದಿಗೆ ಚರ್ಚೆ ನಡೆಸಿದ ಪೂಂಜ ಅವರು ಬಳಿಕ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ತೀರ್ಮಾನ ಕೈಗೊಂಡು ಠಾಣೆಗೆ ಹಾಜರಾದರು.ಇದಕ್ಕೆ ಮೊದಲು ಪ್ರತಾಪಸಿಂಹ ನಾಯಕ್ ಅವರ ಕಚೇರಿಗೆ ಮುಖಂಡರು ಭೇಟಿ ನೀಡಿದರು. ನಂತರ ಹರೀಶ್ ಪೂಂಜ ಅವರೂ ಅಲ್ಲಿಗೆ ಆಗಮಿಸಿ ಮಾತುಕತೆ ನಡೆಸಿದ ನಂತರ ಠಾಣೆಗೆ ತೆರಳಿದರು.

ಸ್ಟೇಷನ್ ಬೇಲ್ ನಲ್ಲಿ ಬಿಡುಗಡೆ-ಎಸ್.ಪಿ.
ಬೆಳ್ತಂಗಡಿ ಠಾಣಾ 58/2024,ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿತ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಎಸ್.ಪಿ.ಸಿಬಿ.ರಿಷ್ಯಂತ್ ಅವರು ಪೊಲೀಸರು ಹಾಗೂ ಮಾಧ್ಯಮದವರು ಇರುವ ವಾಟ್ಸಪ್ ಗ್ರೂಪ್‌ನಲ್ಲಿ ರಾತ್ರಿ 10.43ಕ್ಕೆ ಸಂದೇಶ ರವಾನಿಸಿದ್ದಾರೆ. ರಾತ್ರಿ 10 ಗಂಟೆಗೆ ಇದೇ ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ರವಾನಿಸಿದ್ದ ಎಸ್.ಪಿ.ಯವರು, ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತರಾದ ಹರೀಶ್ ಪೂಂಜರನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲು ಬೆಳ್ತಂಗಡಿ ಠಾಣಾ ಪೊಲೀಸರು ಸದ್ರಿಯವರ ಮನೆಗೆ ತೆರಳಿರುತ್ತಾರೆ.ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು, ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿಕೊಂಡಿರುತ್ತಾರೆ ಹಾಗೂ ಅದರಂತೆ ಸಂಸದರು ಆರೋಪಿತರಾದ ಹರೀಶ್ ಪೂಂಜಾರನ್ನು ಪೊಲೀಸರೊಂದಿಗೆ ಠಾಣೆಗೆ ಕಳುಹಿಸಿರುತ್ತಾರೆ.ಪ್ರಸ್ತುತ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜಾರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

ಠಾಣೆಗೆ ವಿಚಾರಣೆಗೆ ಹಾಜರಾಗುವೆ: ಹರೀಶ್ ಪೂಂಜ
ಪೊಲೀಸರು ಎರಡು ಪ್ರಕರಣಗಳಲ್ಲಿ ನೋಟಿಸ್ ನೀಡಿದ್ದಾರೆ.ನಾನು ಇವತ್ತು ಅಥವಾ ನಾಳೆ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆಗೆ ಸಹಕಾರ ನೀಡುತ್ತೇನೆ.ಕಾನೂನು ರೀತಿಯಲ್ಲಿ ಸಹಕರಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.ಮೇ 22ರಂದು ರಾತ್ರಿ ಮನೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇವತ್ತು ರಾತ್ರಿ ಕಾಲಾವಕಾಶ ಸಿಕ್ಕಿದರೆ ನಮ್ಮ ಜನಪ್ರತಿನಿಧಿಗಳೊಂದಿಗೆ ಠಾಣೆಗೆ ಹೋಗುತ್ತೇನೆ. ನಾಳೆಯಾದರೆ ವಕೀಲರು ಮತ್ತಿತರರೊಂದಿಗೆ ಹೋಗುತ್ತೇನೆ. ಐದು ದಿನಗಳ ಕಾಲಾವಕಾಶ ಕೋರಿದ್ದೇನೆ ಎಂದರು. ಅಮಾಯಕ ಕಾರ್ಯಕರ್ತನನ್ನು ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಫಿಕ್ಸ್ ಮಾಡಿದಾಗ ನಾನು ಹೋರಾಟ ಮಾಡಿದ್ದೇನೆ.ಕಾರ್ಯಕರ್ತನನ್ನು ವಿನಾ ಕಾರಣ ಜೈಲಿಗೆ ಹಾಕಿದಾಗ ಜನಪ್ರತಿನಿಧಿಯಾಗಿ ಜೈಲು ಅಥವಾ ಪೊಲೀಸ್ ಠಾಣೆಯಲ್ಲಿ ವಿರೋಧ ವ್ಯಕ್ತಪಡಿಸುವುದು ನನ್ನ ಜವಾಬ್ದಾರಿ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದ್ದು, ಈ ಸರಕಾರಕ್ಕೆ ಪೊಲೀಸರ ಮೂಲಕ ಎಚ್ಚರಿಕೆ ರವಾನೆಯಾಗಿದೆ ಎಂದರು.

ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ಕಾಂಗ್ರೆಸ್‌ನವರಿಗೆ ಪೊಲೀಸರ ಮೇಲಿನ ದೌರ್ಜನ್ಯದ ಕುರಿತು ಮಾತನಾಡುವ ನೈತಿಕತೆ ಇಲ್ಲ. ಅವರು ತುರ್ತು ಪರಿಸ್ಥಿತಿಯಿಂದ ಇದುವರೆಗೆ ದೌರ್ಜನ್ಯ ಮಾಡಿದವರು. ನಾನು ಅಧಿಕಾರಕ್ಕೋಸ್ಕರ ಪೊಲೀಸರಿಗೆ ಬೈದಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ಬಿದರಿಯವರ ಕಾಲರ್ ಪಟ್ಟಿ ಹಿಡಿದಿದ್ದರು ಎಂದು ಹರೀಶ್ ಪೂಂಜ ಹೇಳಿದರು.

ಪ್ರತಿಭಟನೆ ತಡೆಯಲು ಯತ್ನ: ಪೊಲೀಸ್ ಇಲಾಖೆ ಮೇಲೆ ಕಾಂಗ್ರೆಸ್ ಒತ್ತಡ ಹಾಕುವ ಮೂಲಕ ಪ್ರತಿಭಟನೆಗೆ ಅವಕಾಶ ಕೊಡಲಿಲ್ಲ.ಇದಕ್ಕೆ ನೀಡಿದ ಕಾರಣ ನೀತಿ ಸಂಹಿತೆ. ರೇವಣ್ಣ ಪೆನ್ ಡ್ರೈವ್ ವಿಷಯದಲ್ಲಿ ನೀತಿ ಸಂಹಿತೆ ಇರುವಾಗ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದಾಗ ಯಾವ ಕಾನೂನು ಇತ್ತು? ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯವಾಗಿದೆ ಎಂದಾಗ ಹೀಗೆ ಮಾಡುತ್ತೀರಾ? ಜನರಿಗೆ ಬೆದರಿಕೆ ಹಾಕಿದರೂ ಪ್ರತಿಭಟನೆಗೆ 1,500 ಜನ ಬಂದರು. ಕೊನೆಗೆ ನನ್ನ ಮೇಲೆ ಸಿದ್ದರಾಮಯ್ಯ ಬಂದು ಹೋದ ಬಳಿಕ ಇನ್ನೊಂದು ಪ್ರಕರಣ ದಾಖಲಿಸಿದಿರಿ ಎಂದು ಪೂಂಜ ಆಕ್ರೋಶ ವ್ಯಕ್ತಪಡಿಸಿದರು.

ಜೀವ ಇರುವವರೆಗೆ ಕಾರ್ಯಕರ್ತರ ಸೇವೆ: ಬೆಳಗ್ಗೆಯಿಂದ ಕಾರ್ಯಕರ್ತರು ಬಿಸ್ಕೆಟನ್ನು ಬಿರಿಯಾನಿ ರೀತಿ ತಿಂದು ಕುಳಿತಿದ್ದಾರೆಂದರೆ ಅದು ನಮ್ಮ ಸಾಮರ್ಥ್ಯ.ನಮ್ಮೆಲ್ಲ ನಾಯಕರು ಬೆಂಬಲವಾಗಿ ನಿಂತಿದ್ದಾರೆ. ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಸಾಧ್ಯವಿಲ್ಲ. ಈ ಜೀವ ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹರೀಶ್ ಪೂಂಜ ಹೇಳಿದರು.

 

 

LEAVE A REPLY

Please enter your comment!
Please enter your name here