ಮಂಗಳೂರು(ಹೊಸದಿಲ್ಲಿ): ಭಾರತದಲ್ಲಿ ಡ್ರೈವಿಂಗ್ ಲೈಸನ್ಸ್ ಅಥವಾ ವಾಹನ ಚಾಲನಾ ಪರವಾನಿಗೆ ಪಡೆಯುವುದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದರೊಂದಿಗೆ ವಿಳಂಬಕ್ಕೂ ಕಾರಣವಾಗುತ್ತಿದೆ. ಮಾತ್ರವಲ್ಲದೆ ದೇಶಾದ್ಯಂತ ರಸ್ತೆ ಸುರಕ್ಷತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹಾಲಿ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಪ್ರಕಟಿಸಿದೆ. ಇವು ಸುರಕ್ಷತೆಯನ್ನು ಖಚಿತಪಡಿಸುವ ಜೊತೆಗೆ ಡ್ರೈವಿಂಗ್ ಲೈಸನ್ಸ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಿವೆ. ಜೂ. 1ರಿಂದ ಅರ್ಜಿದಾರರು ಪ್ರಾದೇಶಿಕ ಸಾರಿಗೆ ಕಚೇರಿಗಳ ಬದಲಾಗಿ ತಮ್ಮ ಆಯ್ಕೆಯ ಸಮೀಪದ ಕೇಂದ್ರದಲ್ಲಿ ಚಾಲನಾ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಸರಕಾರದಿಂದ ಪ್ರಮಾಣೀಕೃತ ಖಾಸಗಿ ಕಂಪನಿಗಳು ಚಾಲನಾ ಪರೀಕ್ಷೆಯನ್ನು ನಡೆಸಲಿವೆ. ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಇನ್ನು ಮುಂದೆ ಇನ್ನಷ್ಟು ಕಷ್ಟವಾಗಲಿದೆ ಮತ್ತು 2,000ರೂ.ವರೆಗೂ ದಂಡವನ್ನು ತೆರಬೇಕಾಗುತ್ತದೆ. ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವಾಗ ಸಿಕ್ಕಿಬಿದ್ದರೆ ಅವರ ಹೆತ್ತವರು 25,000 ರೂ.ಗಳ ಭಾರೀ ದಂಡವನ್ನು ಕಟ್ಟುವ ಜೊತೆಗೆ ಕ್ರಮವನ್ನೂ ಎದುರಿಸಬೇಕಾಗುತ್ತದೆ. ಜೊತೆಗೆ ವಾಹನದ ನೋಂದಣಿಯೂ ರದ್ದಾಗಲಿದೆ.