ಮಂಗಳೂರು: ಶಾಸಕ ಹರೀಶ್ ಪೂಂಜ ಪೊಲೀಸರು, ತಹಶೀಲ್ದಾರನ್ನು ನಿಂದಿಸಿ ಬೆಳ್ತಂಗಡಿ ನಾಗರಿಕರಿಗೆ ಅವಮಾನ ಮಾಡಿದ್ದಾರೆ. ರೌಡಿಯಂತೆ ವರ್ತಿಸಿ ಇಡೀ ಜಿಲ್ಲೆಗೆ ಕಳಂಕ ತಂದಿದ್ದಾರೆ. ರೌಡಿ ರೀತಿ ವರ್ತಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ತಾಕತ್ತಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಜನರಿಂದ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹರೀಶ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ಕ್ಷೇತ್ರವನ್ನು ರತ್ನವರ್ಮ ಹೆಗ್ಗಡೆ, ವೈಕುಂಠ ಬಾಳಿಗಾ, ಸುಬ್ಬಯ್ಯ ಹೆಗಡೆ, ವಸಂತ ಬಂಗೇರರಂತವರು ಪ್ರತಿನಿಧಿಸಿದ್ದರು. ವಸಂತ ಬಂಗೇರ ಐದು ಬಾರಿ ಶಾಸಕರಾಗಿ ಗೌರವ ತಂದುಕೊಟ್ಟಿದ್ದಾರೆ. ಹರೀಶ್ ಪೂಂಜ ಈಗ ವಸಂತ ಬಂಗೇರ ಆಗಲು ಹೋಗಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಬಂಗೇರ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದವರು, ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಕೆಲಸ ಮಾಡುತ್ತಿದ್ದರು. ಯಾವತ್ತೂ ಭ್ರಷ್ಟಾಚಾರಿ, ರೌಡಿಗಳ ಪರ ಕೆಲಸ ಮಾಡಿದವರಲ್ಲ ಎಂದು ಹೇಳಿದ ಅವರು, ಬಿಜೆಪಿ ಕಾರ್ಯಕರ್ತ, ರೌಡಿಶೀಟರ್ ಶಶಿರಾಜ್ ಶೆಟ್ಟಿ, ಬೆಳ್ತಂಗಡಿಯಲ್ಲಿ ಕಲ್ಲು ಗಣಿಗಾರಿಕೆ, ಸ್ಯಾಂಡ್ ಮಾಫಿಯಾ ಮಾಡುತ್ತಿರುವ ವ್ಯಕ್ತಿ. ಆತನ್ನು ಪೊಲೀಸರು ಬಂಧಿಸಿದ್ದಕ್ಕೆ ಠಾಣೆಗೆ ನುಗ್ಗಿದ ಶಾಸಕ ಪೂಂಜ, ಇದು ನಿಮ್ಮ ಅಪ್ಪನ ಠಾಣೆಯಾ, ತಲೆ ಕಡೀರಿ ಎಂದು ಹೇಳುತ್ತಾರೆ. ಶಾಸಕರ ಮಾತನ್ನು ಜಿಲ್ಲೆಯ ಜನತೆ ಒಪ್ಪುತ್ತಾರೆಯೇ ಅಂತ ಕೇಳಬೇಕಾಗುತ್ತದೆ. ಈ ಹಿಂದೆ ಅರಣ್ಯ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ಬೈದು ಎಫ್ಐಆರ್ ಹಾಕಿಸಿಕೊಂಡಿದ್ದ ಹರೀಶ್ ಪೂಂಜ, ಈಗ ಡಿಜೆ ಹಳ್ಳಿ ರೀತಿ ಠಾಣೆಗೆ ಬೆಂಕಿ ಹಚ್ಚುತ್ತೇವೆಂದು ಹೇಳುತ್ತಾರೆ. ಅಂದರೆ, ಅಲ್ಲಿಯೂ ಇವರ ಕೈವಾಡ ಇರಬಹುದು ಶಂಕೆ ಮೂಡುತ್ತದೆ. ಒಟ್ಟು ಪ್ರಚಾರದಲ್ಲಿ ಇರಬೇಕು, ಒಳ್ಳೆಯದಕ್ಕೋ, ಕೆಟ್ಟದಕ್ಕೋ ಹೇಗಾದ್ರೂ ಪ್ರಚಾರದ ಹುಚ್ಚು ಹರೀಶ್ ಪೂಂಜ ತಲೆಗೆ ಹತ್ತಿದೆ. ಪೊಲೀಸರು ಅರೆಸ್ಟ್ ಮಾಡಲು ಮನೆಗೆ ಹೋದರೆ ಅವಿತುಕೊಳ್ಳುವ ಇವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮುಂದಿಟ್ಟು ಪೊಲೀಸರು ಜನರನ್ನು ನೋಡಿ ಹೆದರಿ ಹೋದರು ಅಂತ ಹೇಳುತ್ತಾರೆ. ಇನ್ನು ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಅಷ್ಟು ಪ್ರಾಯ ಇವರಿಗೆ ಆಗಿಲ್ಲ, ರಾಜಕೀಯದಲ್ಲಿ ಅಷ್ಟು ಪಳಗಿದ್ದೂ ಇಲ್ಲ. ಅವರನ್ನು ಪ್ರಶ್ನಿಸುವುದಕ್ಕೆ ಇವರು ರಾಜಕೀಯದಲ್ಲಿ ಅವರಿನ್ನೂ ಬಚ್ಚ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹರೀಶ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.