ಕಾಂಗ್ರೆಸ್ ಅಭಿವೃದ್ಧಿ ಕಡೆಗೆ ಗಮನ ಕೊಡಲಿ: ಸತೀಶ್ ಕುಂಪಲ

ಮಂಗಳೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರಕಾರ ಒಂದು ವರ್ಷವನ್ನು ಪೂರೈಸಿದ್ದು, ನಿರಂತರವಾಗಿ ಬಿಜೆಪಿ ಜನಪ್ರತಿನಿಧಿ ಹಾಗೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ ಬಿಟ್ಟರೆ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ನೀಡುತ್ತಿಲ್ಲ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಅವರು ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪೊಲೀಸ್ ಇಲಾಖೆಯಂತೂ ಪೂರ್ಣರೂಪದಲ್ಲಿ ವಿಫಲವಾಗಿದೆ. ಬರೀ ಜನಪ್ರತಿನಿಧಿಗಳಿಗೆ ಕಿರುಕುಳ ನೀಡುವ ಜತೆಗೆ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ, ಗಡಿಪಾರು ಮಾಡುವ ಕೆಲಸವನ್ನು ಪೊಲೀಸ್ ಇಲಾಖೆ ಕಾಂಗ್ರೆಸ್ ಅಣತಿಯಂತೆ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ನಮ್ಮ ಸರಕಾರ ಇದ್ದಾಗ ಜಿಲ್ಲೆಯಲ್ಲಿ ಏಳು ಬಿಜೆಪಿಯ ಶಾಸಕರು ಇದ್ದಾಗಲೂ ಉತ್ತಮವಾದ ಶಾಂತಿ ಸುವ್ಯವಸ್ಥೆ ಇತ್ತು. ಬೆಳ್ತಂಗಡಿಯ ಶಾಸಕರ ವಿಚಾರದಲ್ಲಿ ನೋಟಿಸ್ ಕೊಟ್ಟು ಠಾಣೆಗೆ ಕರೆಸಿಕೊಳ್ಳುವ ಬದಲು ಬಂಧನ ಮಾಡುವ ಉದ್ದೇಶದಿಂದ ಶಾಸಕರ ಮನೆಗೆ ಪೊಲೀಶ್ ಸಿಬ್ಬಂದಿಗಳು ಹೋಗಿದ್ದರು ಇಂತಹ ಕಾರ್ಯವನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಪೊಲೀಸದರು ಶಾಸಕರ ಮೇಲೆ ಯಾವುದೆಲ್ಲ ಕೇಸ್ ಹಾಕಿದ್ದಾರೋ ಅದಕ್ಕೆ ಕಾನೂನು ಪ್ರಕಾರವೇ ಉತ್ತರ ನೀಡುತ್ತೇವೆ ಎಂದರು.

ಜಿಲ್ಲೆಯ ಬೆಳ್ತಂಗಡಿಯಲ್ಲಿ ಮಾತ್ರ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ. ಜಿಲ್ಲೆಯ ಎಲ್ಲೆಡೆ ನಡೆಯುತ್ತಿದೆ ಇದರ ಕುರಿತು ಕ್ರಮ ಜರುಗಿಸಬೇಕು. ಅಕ್ರಮ ಗಣಿಗಾರಿಕೆ, ಕಲ್ಲುಕೋರೆ, ಮರಳು, ಚಟುವಟಿಕೆಯಲ್ಲಿ ಯಾರೇ ತೊಡಗಿದ್ದರೂ ಕೂಡ ಅವರನ್ನು ಶಿಕ್ಷಿಸುವ ಕೆಲಸವನ್ನು ಮಾಡಬೇಕು. ಇಂತಹ ವಿಚಾರದಲ್ಲಿ ಬಿಜೆಪಿ ಕೂಡ ಬೆಂಬಲ ನೀಡುತ್ತದೆ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ಪೂಜಾ ಪೈ, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here