ನಾಲ್ವರನ್ನು ಬಲಿ ತೆಗೆದ ಮೆಸ್ಕಾಂ ಲಾರಿ, ಕಾರುಗಳ ನಡುವಿನ ಅಪಘಾತ

ಚಿಕ್ಕಮಗಳೂರು(ಮಂಗಳೂರು): ಮೂಡಿಗೆರೆಯ ಬಣಕಲ್-ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಸ್ಕಾಂ ಲಾರಿ, ಓಮಿನಿ ಹಾಗೂ ಆಲ್ಟೋ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದ ಹಂಪಯ್ಯ(65), ಪ್ರೇಮಾ(58), ಮಂಜಯ್ಯ(60) ಮತ್ತು ಪ್ರಭಾಕರ(45) ಎಂದು ಗುರುತಿಸಲಾಗಿದೆ. ಓಮ್ನಿ ವ್ಯಾನ್‌ನಲ್ಲಿ ಒಂಬತ್ತು ಮಂದಿ ಮತ್ತು ಆಲ್ಟೊ ಕಾರಿನಲ್ಲಿ ಏಳು ಜನ ಪ್ರಯಾಣ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ವಿವರ
ಧರ್ಮಸ್ಥಳಕ್ಕೆ ತೆರಳಿದ್ದ ಒಂದೇ ಕುಟುಂಬದವರು ಓಮ್ನಿ ವ್ಯಾನ್ ಮತ್ತು ಆಲ್ಟೊ ಕಾರಿನಲ್ಲಿ ಚಿತ್ರದುರ್ಗಕ್ಕೆ ವಾಪಸ್ ಹೋಗುತ್ತಿದ್ದರು. ಚಾರ್ಮಾಡಿ ಘಾಟಿ ಹತ್ತಿರ ಕೊಟ್ಟಿಗೆಹಾರ ದಾಟಿ ಮೂಡಿಗೆರೆ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಮೆಸ್ಕಾಂ ಲಾರಿಯು ಓಮ್ನಿ ವ್ಯಾನ್‌ಗೆ ಮೊದಲು ಡಿಕ್ಕಿ ಹೊಡೆದಿದೆ. ವ್ಯಾನಿನ ಹಿಂದೆ ಬರುತ್ತಿದ್ದ ಆಲ್ಟೊ ಕಾರು ಕೂಡ ವ್ಯಾನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾನ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರನ್ನು ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಇನ್ನು ಆಲ್ಟೊ ಕಾರಿನಲ್ಲಿದ್ದ ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಆಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ಯಲಾಗಿದೆ. ಬಣಕಲ್ ಠಾಣೆ ಪೊಲೀಸರು, ಮೃತದೇಹವನ್ನು ಮೂಡಿಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿನ ಶವಾಗಾರಕ್ಕೆ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here