ಮಂಗಳೂರು(ಮೈಸೂರು): ಎಪ್ರಿಲ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಪ್ರಾಜೆಕ್ಟ್ ಟೈಗರ್‌ನ 50ನೇ ವರ್ಷಾಚರಣೆ ಉದ್ಘಾಟಿಸಲು ಆಗಮಿಸಿದ್ದ ವೇಳೆ ಮೈಸೂರಿನಲ್ಲಿ ಉಳಿದುಕೊಂಡಿದ ಹೋಟೆಲ್‌ನ ರೂ 80.6 ಲಕ್ಷ ಮೊತ್ತದ ಬಿಲ್ ಇನ್ನೂ ಪಾವತಿಸದೇ ಇರುವುದರಿಂದ ಹೋಟೆಲ್ ಆಡಳಿತ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ ಎಂದು ದಿ ಹಿಂದೂ ಡಾಟ್ ಕಾಂ ವರದಿ ಮಾಡಿದೆ.
ಮೋದಿ ಭಾಗವಹಿಸಿದ್ದ ಕಾರ್ಯಕ್ರಮವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವನ್ನು ರೂ.3ಕೋಟಿ ವೆಚ್ಚದಲ್ಲಿ ಎಪ್ರಿಲ್ 9ರಿಂದ 11ರ ತನಕ ನಡೆಸುವಂತೆ ರಾಜ್ಯ ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು ಹಾಗೂ ಸಂಪೂರ್ಣ ವೆಚ್ಚವನ್ನು ಕೇಂದ್ರ ನೀಡುವ ಭರವಸೆ ನೀಡಲಾಗಿತ್ತೆಂದು ಹೇಳಲಾಗಿದೆ. ಈ ಕಾರ್ಯಕ್ರಮದ ಒಟ್ಟು ವೆಚ್ಚ ರೂ 6.33 ಕೋಟಿ ಎಂದು ತಿಳಿಯಲಾಗಿದೆ. ಕೇಂದ್ರ ರೂ.3 ಕೋಟಿ ಪಾವತಿಸಿದ್ದರೂ ಉಳಿದ ರೂ 3.33 ಕೋಟಿ ಪಾವತಿಸಿಲ್ಲ. ಆರಂಭದಲ್ಲಿ ಕಾರ್ಯಕ್ರಮಕ್ಕೆ ರೂ 3 ಕೋಟಿ ವೆಚ್ಚ ಆಗಲಿದೆ ಎಂದು ತಿಳಿಯಲಾಗಿದ್ದರೂ ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಲ ಹೆಚ್ಚುವರಿ ಚಟುವಟಿಕೆಗಳಿದ್ದುದರಿಂದ ವೆಚ್ಚ ಹೆಚ್ಚಾಗಿತ್ತು.
ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎನ್‌ಟಿಸಿಎ ಉಪ ಮಹಾನಿರ್ದೇಶಕರಿಗೆ ಸೆಪ್ಟೆಂಬರ್ 2023ರಲ್ಲಿಯೇ ಪತ್ರ ಬರೆದು ಬಾಕಿ ಹಣದ ಕುರಿತು ಜ್ಞಾಪಿಸಿದ್ದರು. ಆದರೆ ಪ್ರಧಾನಿ ಮೈಸೂರಿನ ರ‍್ಯಾಡಿಸನ್ ಬ್ಲೂ ಪ್ಲಾಝಾದಲ್ಲಿ ಉಳಿದುಕೊಂಡ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕೆಂದು ಸೂಚಿಸಲಾಯಿತು. ಮಾರ್ಚ್ 2024ರಲ್ಲಿ ರಾಜ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತೆ ಪತ್ರ ಬರೆದು ಹೋಟೆಲ್ ಬಿಲ್ ರೂ 80.6 ಲಕ್ಷ ಪಾವತಿಸಲಾಗಿಲ್ಲ ಎಂದು ಹೇಳಿದ್ದರೂ ಪ್ರಯೋಜನವಾಗಿಲ್ಲ. ಹೋಟೆಲ್‌ನ ಜನರಲ್ ಮ್ಯಾನೇಜರ್ ಅವರು ಮೇ 21, 2024ರಂದು ರಾಜ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಹೋಟೆಲ್ ಬಿಲ್ ಪಾವತಿಸದೇ ಇರುವ ಬಗ್ಗೆ ಮತ್ತೆ ಜ್ಞಾಪಿಸಿದ್ದರು ಹಾಗೂ ಬಾಕಿ ಮೊತ್ತಕ್ಕೆ 18% ಬಡ್ಡಿ ಸೇರಿದರೆ ರೂ 12.09 ಲಕ್ಷ ಹೆಚ್ಚುವರಿ ಪಾವತಿಸಬೇಕೇಂದು ಹೇಳಿದ್ದರು.
ಜೂನ್ 1ರೊಳಗೆ ಬಾಕಿ ಪಾವತಿಸದೇ ಇದ್ದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ಹೋಟೆಲ್ ಆಡಳಿತ ನೀಡಿದೆ ಎಂದು ವರದಿಯಾಗಿದೆ.ಈ ವೆಚ್ಚವನ್ನು ರಾಜ್ಯ ಸರ್ಕಾರ ಪಾವತಿಸಬೇಕೆಂದು ಕೇಂದ್ರ ಹೇಳಿರುವುದಕ್ಕೆ ರಾಜ್ಯ ಸರ್ಕಾರ ಆಕ್ಷೇಪಿಸಿದ್ದು ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿತ್ತು ಎಂಬುದನ್ನು ನೆನಪಿಸಿದೆ.