ಆವರಣಗೋಡೆ ಕುಸಿದು ಎರಡು ಕಾರುಗಳು ಜಖಂ

ಮಂಗಳೂರು(ಉಳ್ಳಾಲ): ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ಬಳಿ ಮರದ ಮಿಲ್‌ನ ಆವರಣ ಗೋಡೆ ಕುಸಿದು ಎರಡು ಕಾರುಗಳು ಜಖಂಗೊಂಡಿದ್ದು, ಒಂದು ಕೈಗಾಡಿ ಹಾನಿಗೊಳಗಾಗಿದೆ.

ಗೋಡೆ ಕುಸಿದ ಸಂದರ್ಭದಲ್ಲಿ ವಾಹನದಲ್ಲಿ ಯಾರೂ ಇಲ್ಲದ ಕಾರಣ ಮತ್ತು ಆವರಣ ಗೋಡೆ ಬದಿಯಲ್ಲಿ ಎರಡೇ ವಾಹನಗಳು ಇದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದಂತಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣಗೋಡೆ ಒದ್ದೆಯಾಗಿತ್ತು. ಯೇನೆಪೋಯ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಕೇರಳದ ಕುಟುಂಬವೊಂದು ಆವರಣ ಗೋಡೆ ಪಕ್ಕ ಕಾರು ನಿಲ್ಲಿಸಿದ್ದರು. ಆವರಣ ಗೋಡೆಯ ಕೆಂಪುಕಲ್ಲುಗಳಡಿ ಸಿಲುಕಿ ಈ ಕಾರುಗಳ ಗಾಜುಗಳು ನಜ್ಜುಗುಜ್ಜಾಗಿವೆ. ಸ್ಥಳದಲ್ಲಿದ್ದ ಬೇಲ್‍ಪುರಿ ಮಾರಾಟದ ಗಾಡಿ ಕಲ್ಲಿನಡಿಗೆ ಸಿಕ್ಕಿ ಸಂಪೂರ್ಣ ಹಾನಿಗೊಂಡಿದೆ. ಬೇಲ್‍ಪುರಿ ಮಾರುವವ ಎರಡು ದಿನಗಳ ಹಿಂದೆ ಸ್ಥಳಕ್ಕೆ ₹ 15 ಸಾವಿರ ಪಾವತಿ ಮಾಡಿ ಆವರಣ ಗೋಡೆ ಪಕ್ಕದಲ್ಲಿ ಕೈಗಾಡಿಯನ್ನು ನಿಲ್ಲಿಸಿದ್ದ. ಆ ಕೈಗಾಡಿ ಕಲ್ಲುಗಳ ಅಡಿ ಸಿಲುಕಿ ಅಪ್ಪಚ್ಚಿಯಾಗಿದೆ.

ಆಸ್ಪತ್ರೆಗೆ ರೋಗಿಗಳನ್ನು ಕರೆತರುವವರು ಖಾಸಗಿ ಜಾಗದಲ್ಲಿ ಹಣ ಪಾವತಿ ಮಾಡಿ ಕಾರು ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಪ್ರತೀ ದಿನ ಈ ಜಾಗದ ಪಕ್ಕದಲ್ಲಿರುವ ಮರದ ಮಿಲ್ಲಿನ ಆವರಣಗೋಡೆಯ ಬಳಿ ಆರೇಳು ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಶನಿವಾರ ಇಲ್ಲಿ ಎರಡು ಕಾರುಗಳನ್ನು ಮಾತ್ರ ನಿಲುಗಡೆ ಮಾಡಲಾಗಿತ್ತು. ಆವರಣಗೋಡೆಯ ಇನ್ನೊಂದು ಭಾಗದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಯಾವುದೇ ಹಾನಿ ಆಗಿಲ್ಲ.

LEAVE A REPLY

Please enter your comment!
Please enter your name here