ಪರರ ಆಸ್ತಿ ಲಪಟಾಯಿಸಲು ಕೋರ್ಟ್‌ನಿಂದ ನಕಲಿ ಡಿಕ್ರಿ-ಬೃಹತ್ ಜಾಲ ಪತ್ತೆ-ವಕೀಲರ ಸಹಿತ ಹಲವರ ಮೇಲೆ ಎಫ್‌ಐಆರ್‌

ಮಂಗಳೂರು(ಬೆಂಗಳೂರು): ಇನ್ನೊಬ್ಬರ ಆಸ್ತಿಯನ್ನು ಮೋಸದ ವಿಧಾನದಿಂದ ನುಂಗಿಹಾಕುವ ಬೃಹತ್ ಜಾಲವನ್ನು ಹೈಕೋರ್ಟ್‌ನ ಸೂಚನೆಯ ಮೇರೆಗೆ ಬೆಂಗಳೂರು ಪೊಲೀಸರು ಭೇದಿಸಿದ್ದಾರೆ.

ಈ ಜಾಲ ನಕಲಿ ಕಕ್ಷಿದಾರರನ್ನು ಹಾಗೂ ಪ್ರತಿವಾದಿಗಳನ್ನು ಸೃಷ್ಟಿಸಿ ನ್ಯಾಯಾಲಯದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆದು ನೂರಾರು ಕೋಟಿ ರೂಪಾಯಿ ಆಸ್ತಿ ಲಪಟಾಯಿಸುತ್ತಿತ್ತು. ಇಂತಹ ಬೃಹತ್ ವಂಚಕರ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಜಾಲದ ಬಗ್ಗೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು 130 ಪ್ರಕರಣಗಳ ಪೈಕಿ 50 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ವಾರಸುದಾರರು ಉಪಯೋಗಿಸದ ಖಾಲಿ ಜಾಗಗಳನ್ನು ಕಬಳಿಸುವಲ್ಲಿ ಈ ಜಾಲ ಹಲವು ವರ್ಷಗಳಿಂದ ಸಕ್ರಿಯವಾಗಿತ್ತು ಪ್ರಕರಣ ಒಂದರ ವಿಚಾರಣೆಗೆ ಸಂದರ್ಭದಲ್ಲಿ ಈ ಜಾಲದ ಸುಳಿವು ಪತ್ತೆ ಮಾಡಿದ್ದ ಹೈಕೋರ್ಟ್ ತನಿಖೆಗೆ ಸೂಚನೆ ನೀಡಿತ್ತು. ಮೋಸದ ಮಾರ್ಗದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಲಘು ಪ್ರಕರಣಗಳ ನ್ಯಾಯಾಲಯದ ರಿಜಿಸ್ಟ್ರಾರ್ ಆರ್ ಧನಲಕ್ಷ್ಮಿ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ 2020 ಡಿಸೆಂಬರ್ 7ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳು, ಜಾಲದ ಪ್ರಮುಖ ಆರೋಪಿ ಜಾನ್ ಮೋಸಸ್ ಸೇರಿದಂತೆ 18 ಆರೋಪಿಗಳನ್ನು ಬಂಧಿಸಿದ್ದರು.

ಬಂಧಿತರಲ್ಲಿ ನಕಲಿ ಕಕ್ಷಿದಾರರನ್ನು ಸೃಷ್ಟಿಸಿದ ವಂಚಕರು, ಅವರಿಗೆ ಸಹಾಯ ನೀಡಿದ ವಕೀಲರೂ ಮತ್ತು ನಕಲಿ ಕಕ್ಷಿದಾರರು ಸೇರಿದ್ದಾರೆ. ಬಂಧಿತರಲ್ಲಿ ಕೆಲವರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ಹೀಗೆ ಆಸ್ತಿ ಕಬಳಿಸಿದ ಒಟ್ಟು 130 ಪ್ರಕರಣಗಳು ತನಿಖೆ ವೇಳೆ ಪತ್ತೆಯಾಗಿದ್ದು, ಈ ಪೈಕಿ 50 ಪ್ರಕರಣಗಳ ತನಿಖೆ ಮುಕ್ತಾಯಗೊಂಡಿದ್ದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳ ತನಿಖೆ ಮುಂದುವರಿದಿದೆ ಎಂದು ಸಿಐಡಿ ಮಾಹಿತಿ ನೀಡಿದೆ. ಪ್ರಮುಖ ಆರೋಪಿ ಮೋಸಸ್ ಜಾನ್ ಎಂಬಾತ ಸೇಂಟ್ ಜಾನ್ಸ್ ರಸ್ತೆಯಲ್ಲಿ ಜಾನ್ ಗ್ಲೋಬಲ್ ಬಿಸಿನೆಸ್ ಕಂಪನಿ ಯ ಕಚೇರಿ ಹೊಂದಿದ್ದ. ನಕಲಿ ದಾಖಲೆ ಸೃಷ್ಟಿಸಿ ಪರರ ಆಸ್ತಿಯನ್ನು ಕಬಳಿಸುವುದೇ ಈತನ ವೃತ್ತಿ. ಈ ಕೃತ್ಯದಲ್ಲಿ ವಕೀಲರ ಸಹಿತ ಹಲವರು ಭಾಗಿಯಾಗಿದ್ದರು. ಇದೀಗ ಎಲ್ಲರ ವಿರುದ್ಧವು ಪುರಾವೆಗಳು ಸಂಗ್ರಹವಾಗಿದ್ದು ಅವುಗಳನ್ನು ಆರೋಪ ಪಟ್ಟಿ ಜೊತೆಗೆ ಲಗತ್ತಿಸಲಾಗಿದೆ ಎಂದು ಸಿಬಿಐ ಪೊಲೀಸರು ಹೇಳಿದರು.

ಯಶವಂತಪುರ ಬಳಿಯ ಗೋಕುಲ ಒಂದನೇ ಹಂತದ ಆಂಜನೇಯ ದೇವಸ್ಥಾನದ ಬಳಿ ಇರುವ ಶಾ ಹರಿಲಾಲ್ ಬಿಕಬಾಯಿ ಅಂಡ್ ಕಂಪನಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಕಬಳಿಸಲು ಆರೋಪಿಗಳು ನಕಲಿ ದಾವೆಯನ್ನು ಹೂಡಿದ್ದರು. ಈ ದಾವೆ ದಾಖಲಾದ ಬಗ್ಗೆ ಮಾಹಿತಿ ಪಡೆದ ನೈಜ ಮಾಲೀಕರು ಹೈಕೋರ್ಟ್ ಮೆಟಿಲೇರಿದ್ದರು. ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನಕಲಿ ಜಾಲದ ಬಗ್ಗೆ ಹೈಕೋರ್ಟ್ ನ್ಯಾಯ ಪೀಠದ ಗಮನಕ್ಕೆ ಬಂತು. ಈ ನಕಲಿ ಜಾಲದ ಕೃತ್ಯಗಳ ಬಗ್ಗೆ ಅನುಮಾನ ಬರುತ್ತಿದ್ದಂತೆ ಸಮಗ್ರ ವಿಚಾರಣೆಗೆ ನ್ಯಾಯಪೀಠ ಸೂಚನೆ ನೀಡಿತು. ಈ ಸೂಚನೆಯ ಆಧಾರದಲ್ಲಿ ದೂರು ದಾಖಲಾಗಿ, ಹಲವು ನಕಲಿ ದಾವೆ ಕೃತ್ಯಗಳು ಮತ್ತು ಮೋಸದ ಜಾಲದ ಬಗ್ಗೆ ವಿವರಗಳು ಪತ್ತೆಯಾಗಿದ್ದವು. ಪ್ರಮುಖ ಆರೋಪಿ ಜಾನ್ ಮೋಸಸ್ ಮತ್ತು ಸಹಚರರು ಹಾಗೂ ಈ ಕೃತ್ಯಕ್ಕೆ ಸಹಕಾರ ನೀಡಿದ ಕೆಲ ವಕೀಲರ ವಿರುದ್ಧವು ಪ್ರಥಮ ಮಾಹಿತಿ ಪಟ್ಟಿ-ಎಫ್‌ಐಆರ್ ದಾಖಲಾಗಿದೆ.

 

 

LEAVE A REPLY

Please enter your comment!
Please enter your name here