ಚಲಿಸುವ ಕಾರಿನಲ್ಲಿ ಈಜುಕೊಳ-ಕೇರಳದ ಯೂಟ್ಯೂಬರ್ ದುಸ್ಸಾಹಸ-ಬಂಧನ

ಮಂಗಳೂರು(ಕೇರಳ): ಮಲಯಾಳಂನ ಚಿತ್ರವೊಂದರಿಂದ ಸ್ಫೂರ್ತಿ ಪಡೆದು ಅಪಾಯಕಾರಿ ಸಾಹಸ ಮಾಡಲು ಮುಂದಾಗಿದ್ದ ಕೇರಳದ ಯೂಟ್ಯೂಬರ್ ನನ್ನು ಬಂಧಿಸಲಾಗಿದೆ. ಸಂಜು ಟೆಕ್ಕಿ ಬಂಧಿತ ಯೂಟ್ಯೂಬರ್. ಈತ ಚಲಿಸುವ ಕಾರಿನಲ್ಲಿ ಟಾರ್ಪಲಿನ್ ಶೀಟ್ ಅನ್ನು ಹಾಕಿ ಅದರಲ್ಲಿ ನೀರನ್ನು ತುಂಬಿ ತಾತ್ಕಾಲಿಕ ಈಜುಕೊಳ ನಿರ್ಮಾಣದ ದುಸ್ಸಾಹಸ ಮಾಡಿದ್ದ. ಯೂಟ್ಯೂಬರ್ ಸಂಜು ಟೆಕ್ಕಿ ಈ ದುಸ್ಸಾಹಸಕ್ಕೆ ಕೈಹಾಕಿದ್ದು, ಯೂಟ್ಯೂಬ್‌ಗೆ ವಿಡಿಯೊ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀವ್ಸ್ ಪಡೆದಿತ್ತು.

ವಿಡಿಯೊದಲ್ಲಿ ಸಂಜು ಮತ್ತು ಆತನ ಸ್ನೇಹಿತರು ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನಲ್ಲಿ ತುಂಬಿದ ನೀರಿನಲ್ಲಿ ಈಜುತ್ತಾ, ಎಳನೀರು ಹೀರುತ್ತಾ, ಮುಳುಗುತ್ತಾ, ಏಳುತ್ತಾ ಖುಷಿಪಡುತ್ತಿರುವುದು ಕಂಡುಬಂದಿದೆ. ನೀರು ಚೆಲ್ಲಿ ಎಂಜಿನ್, ಡ್ರೈವರ್ ಸೀಟಿಗೂ ತಲುಪಿದ್ದು, ಸಂಜು ಮತ್ತು ಆತನ ಸ್ನೇಹಿತರು ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ಅದನ್ನು ಒಣಗಿಸುವ ಯತ್ನ ನಡೆಸಿದ್ದಾರೆ. ಇದರಿಂದ ತೀವ್ರ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಅಲ್ಲದೆ, ನೀರನ್ನು ರಸ್ತೆಗೆ ಸುರಿದಿದ್ದು, ಬೇರೆ ವಾಹನಗಳ ಸುರಕ್ಷತೆಗೆ ಧಕ್ಕೆ ತಂದಿದ್ದಾರೆ.

ಇದನ್ನು ಗಮನಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಯೂಟ್ಯೂಬರ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಾರಿನ ನೋಂದಣಿ ಪ್ರಮಾಣಪತ್ರವನ್ನು ಅಮಾನತು ಮಾಡಲಾಗಿದೆ. ಈ ರೀತಿ ರಸ್ತೆಯಲ್ಲಿ ದುಸ್ಸಾಹಸ ಮೆರೆದ ಸಂಜು ಮತ್ತು ಆತನ ಸ್ನೇಹಿತರಿಗೆ ಶಿಕ್ಷೆಯಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಒಂದು ವಾರ ಸಾಮಾಜಿಕ ಸೇವೆಗೆ ನಿಯೋಜಿಸಲಾಗಿದೆ. ಅಲ್ಲದೆ, ಇಲಾಖೆಯ ತರಬೇತಿ ಕಾರ್ಯಕ್ರಮಕ್ಕೂ ನಿಯೋಜಿಸಲಾಗಿದೆ. ವಾಹನ ಚಾಲನೆ ಮಾಡಿದವನ ಪರವಾನಗಿಯನ್ನೂ ಒಂದು ವರ್ಷ ಅಮಾನತು ಮಾಡಲಾಗಿದೆ.

LEAVE A REPLY

Please enter your comment!
Please enter your name here