ಮಂಗಳೂರು(ಮಹಾರಾಷ್ಟ್ರ): 2001ರಲ್ಲಿ ಮಹಾರಾಷ್ಟ್ರ ಮೂಲದ ಹೊಟೇಲ್ ಉದ್ಯಮಿಯಾಗಿದ್ದ ಜಯ ಶೆಟ್ಟಿ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ರಾಜೇಂದ್ರ ಎಸ್. ನಿಖಾಲ್ಜೆ ಅಲಿಯಾಸ್ ಛೋಟಾ ರಾಜನ್‌ಗೆ ಮುಂಬೈ ವಿಶೇಷ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ MCOCA ನ್ಯಾಯಾಲಯದ ನ್ಯಾಯಾಧೀಶ 23 ವರ್ಷಗಳ ಹಿಂದೆ ನಡೆದ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳು ಮತ್ತು ಇತರ ಕಾನೂನುಗಳ ಅಡಿಯಲ್ಲಿ ಛೋಟಾ ರಾಜನ್ ಅಪರಾಧಿ ಎಂದು ಘೋಷಿಸಿದ್ದಾರೆ.
ಹತ್ಯೆಗೊಳಗಾಗಿರುವ ಜಯ ಶೆಟ್ಟಿ ದಕ್ಷಿಣ ಮುಂಬೈನ ಗ್ರಾಂಟ್ ರೋಡ್ ಪ್ರದೇಶದ ಪ್ರಸಿದ್ಧ ಗೋಲ್ಡನ್ ಕ್ರೌನ್ ಹೋಟೆಲ್ ಮತ್ತು ಬಾರ್‌ನ ಮಾಲೀಕರಾಗಿದ್ದರು. 2001ರ ಮೇ 4ರಂದು ರಾತ್ರಿ ಛೋಟಾ ರಾಜನ್ ಗ್ಯಾಂಗ್‌ನ ಇಬ್ಬರು ಶೂಟರ್‌ಗಳು ಹೋಟೆಲ್ ಆವರಣಕ್ಕೆ ನುಗ್ಗಿ, ಜಯ ಶೆಟ್ಟಿಯನ್ನು ಕೊಲೆ ಮಾಡಿದ್ದರು. ಭೂಗತ ಪಾತಕಿ ಛೋಟಾ ರಾಜನ್ ಸಹಚರರಿಂದ ಸುಲಿಗೆ ಬೆದರಿಕೆಗಳು ಮತ್ತು ಕರೆಗಳು ಬರುತ್ತಿವೆ ಎಂದು ಜಯ ಶೆಟ್ಟಿ ದೂರು ನೀಡಿದ್ದರು. ಅವರಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ನಂತರ, ಅವರು ಪೊಲೀಸ್ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿದರು. ಆದರೆ, ಭದ್ರತೆಯನ್ನು ಹಿಂತೆಗೆದುಕೊಂಡ ಕೇವಲ 2 ತಿಂಗಳ ನಂತರ ಅವರು ಕೊಲೆಗೀಡಾಗಿದ್ದರು.