ಮಂಗಳೂರು: ಕಂಕನಾಡಿ ಮಸೀದಿ ಹೊರಗಡೆ ಪ್ರಾರ್ಥನೆ ಮಾಡಿದ ಸಣ್ಣ ವಿಚಾರಕ್ಕೆ ಸುಮೋಟೋ ದಾಖಲಿಸುವ ಅಗತ್ಯ ಇರಲಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಧರ್ಮಗಳ ಕಾರ್ಯಕ್ರಮಗಳು ಕೆಲವೊಮ್ಮೆ ರಸ್ತೆಯಲ್ಲಿ ನಡೆಯುತ್ತದೆ. ಅದನ್ನು ತಪ್ಪು ಎಂದು ಹೇಳುತ್ತಾ ಹೋಗಲು ಸಾಧ್ಯ ಇಲ್ಲ. ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣ, ಕೃತ್ಯ ನಡೆದಾಗಲೂ ಸುಮೋಟೋ ಪ್ರಕರಣ ದಾಖಲಾಗಿಲ್ಲ. ಇಂತಹ ಸಣ್ಣ ವಿಷಯವನ್ನು ರಂಪಾಟ ಮಾಡುವ ಅಗತ್ಯ ಇರಲಿಲ್ಲ. ಈ ರೀತಿ ಆ ಪ್ರಾರ್ಥನೆಯ ವಿಡಿಯೋ ಮಾಡಿ ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಆರ್.ಪದ್ಮರಾಜ್, ಜಿಲ್ಲೆಯ ಸೌಹಾರ್ದತೆ ಕದಡುವ ಕಾನೂನು ಬಾಹಿರ ಕೆಲಸ ಆದಾಗ ಸುಮೋಟೋ ಪ್ರಕರಣ ದಾಖಲಿಸುವುದು ಸಹಜ. ಆದರೆ ಈ ರೀತಿಯ ಸಣ್ಣ ವಿಚಾರದಲ್ಲಿ ಸಂಬಂಧಪಟ್ಟವರನ್ನು ಕರೆಸಿ ಬುದ್ಧಿವಾದ ಹೇಳುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕಿತ್ತು ಎನ್ನುವುದು ನಮ್ಮ ಅನಿಸಿಕೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಶ್ರಫ್ ಕೆ, ಅಪ್ಪಿ, ಇಬ್ರಾಹಿಂ ಕೋಡಿಜಾಲ್, ಶುಭೋದಯ ಆಳ್ವ, ಶಶಿಕಲಾ, ದೀಪಕ್ ಪೂಜಾರಿ ಉಪಸ್ಥಿತರಿದ್ದರು.