ಮಂಗಳೂರು (ಬೆಂಗಳೂರು): ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ನಿಯೋಜನೆಗೊಳಿಸಲಾಗಿದೆ. ಕಾಶ್ಮೀರದಲ್ಲಿ ಭಾರತ ಪಾಕಿಸ್ಥಾನ ಗಡಿಯ ಬಳಿಯಿರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನಂಟ್ ಆಗಿ ಇದೀಗ ನಿಯೋಜನೆಗೊಂಡಿದ್ದಾರೆ.
ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಹಾಗೂ 2022 ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿದ್ದೇನೆ ಎಂದು ಹೆಮ್ಮೆಯಾಗುತ್ತಿದೆ. ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಮಾಡುವುದರ ಜೊತೆಗೆ ಭಾರತೀಯ ಸೇನಾಧಿಕಾರಿಯಾಗಿ ನನ್ನ ದೇಶ ಕರೆದಾಗ ಗಡಿಯಲ್ಲಿ ದೇಶದ ರಕ್ಷಣೆ ಮಾಡಲೂ ಸಿದ್ಧಳಾಗಿದ್ದೇನೆ ಎಂದು ಭವ್ಯ ನರಸಿಂಹ ಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಾದೇಶಿಕ ಸೇನೆ ಅನ್ನೋದು ರೆಗ್ಯಲರ್ ಆರ್ಮಿಯಲ್ಲ. ಭಾರತದ ನಾಗರೀಕರಿಗೆ ತಮ್ಮ ವೃತ್ತಿಯೊಂದಿಗೆ ಭಾರತೀಯ ಸೇನೆಯ ಭಾಗವಾಗಿ ದೇಶಸೇವೆ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ. ವರ್ಷದಲ್ಲಿ ಎರಡು ತಿಂಗಳ ಕಾಲ ಪ್ರಾದೇಶಿಕ ಸೇನೆಯಲ್ಲಿ ಅವರು ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಪ್ರಸ್ತುತ ಪ್ರಾದೇಶಿಕ ಸೇನೆಯಲ್ಲಿರುವ ಕೆಲವು ಪ್ರಮುಖ ವ್ಯಕ್ತಿಗಳಲ್ಲಿ ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಅನುರಾಗ ಠಾಕೂರ್ ಸೇರಿದ್ದಾರೆ.