ಮಂಗಳೂರು: ಮಳೆಗಾಲದಲ್ಲಿ ಅನಾಹುತ ಸಂಭವಿಸಿದಲ್ಲಿ ತಕ್ಷಣವೇ ಸ್ಪಂದಿಸಲು ಜಿಲ್ಲಾಡಳಿತ ಸಿದ್ದವಾಗಿದೆ ಎಂದು ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ. ಇಂದು ಜಿಲ್ಲೆಗೆ ಆಗಮಿಸಿದ್ದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಳೆಗಾಲಕ್ಕೆ ತೆಗೆದುಕೊಂಡು ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಗುಂಡೂರಾವ್ ಮಳೆಗಾಲಕ್ಕೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಿದ್ದವಾಗಿದ್ದು ಯಾವುದೇ ವಿಕೋಪ ಸಂಭವಿಸಿದ್ರೂ ನಿರ್ವಹಿಸಲು ಸಿದ್ದವಾಗಿದೆ ಎಂದು ಹೇಳಿದ್ರು. ಮಳೆಯಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿದ್ದು, ಅವುಗಳನ್ನು ಗುರುತಿಸಿ ನೊಂದವರಿಗೆ ಪರಿಹಾರ ನೀಡುವ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ತೋಟಗಾರಿಕೆ ಇಲಾಖೆಯಲ್ಲಿ ಮಾತ್ರ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಕೃಷಿಯಲ್ಲಿ ಇದುವರೆಗೂ ಯಾವುದೇ ಹಾನಿ ಆಗಿಲ್ಲ. ಇನ್ನು ಭೂ ಕುಸಿತವಾಗುವ ಸ್ಥಳಗಳನ್ನೂ ಗುರುತಿಸಲಾಗಿದ್ದು, ಕೆಲವೊಂದು ಕಡೆಯಲ್ಲಿ ಜನರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಡಲ ಕೊರೆತದ ವಿಚಾರವಾಗಿಯೂ ಶಾಶ್ವತ ಪರಿಹಾರದ ಬಗ್ಗೆ ಸರ್ಕಾರ ಸಭೆಗಳನ್ನು ನಡೆಸಿದೆ ಎಂದು ಹೇಳಿದ್ದಾರೆ.