ಸಾಮಾಜಿಕ ಜಾಲತಾಣದಲ್ಲಿ ಮಗಳ ಖಾಸಗಿ ವಿಡಿಯೋ ಹರಿಯ ಬಿಟ್ಟ ತಂದೆ – ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ, ಪತ್ನಿಯಿಂದ ದೂರು

ಮಂಗಳೂರು/ಉಡುಪಿ: ತನ್ನ ಸ್ವಂತ ಮಗಳ ಖಾಸಗಿ ವಿಡಿಯೋಗಳನ್ನು ತಂದೆಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಇದರಿಂದ ಮನನೊಂದ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆಪದ್ಬಾಂಧವ ಆಸಿಫ್‌ ಎಂದೇ ಗುರುತಿಸಿಕೊಂಡಿರುವ ಪಡುಬಿದ್ರಿ ಸಮೀಪದ ಕಂಚಿನಡ್ಕ ನಿವಾಸಿ ಆಸಿಫ್‌ ಆರೋಪಿ. ಮಗಳ ವೀಡಿಯೊಗಳನ್ನು ವಾಟ್ಸಪ್‌ ನಲ್ಲಿ ಹಂಚಿಕೊಂಡಿರುವುದಕ್ಕೆ ಪತ್ನಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಆಸಿಫ್‌ ಪುತ್ರಿ ತೀರ್ಥಹಳ್ಳಿಯ ಸಂಬಂಧಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಇದು ಆಸಿಫ್‌ಗೆ ಇಷ್ಟವಿರಲಿಲ್ಲ. ಈ ಹಿನ್ನಲೆಯಲ್ಲಿ ಯುವಕನನ್ನು ಮನೆಗೆ ಕರೆಸಿ ಹಲ್ಲೆ ಮಾಡಿದ್ದಲ್ಲದೆ ಇಬ್ಬರ ಮೊಬೈಲ್‌ ಕಸಿದುಕೊಂಡು ಅದರಲ್ಲಿದ್ದ ವೀಡಿಯೋ ಮತ್ತು ಫೋಟೊಗಳನ್ನು ತನ್ನ ಮೊಬೈಲ್‌ಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಅವುಗಳನ್ನು ವಾಟ್ಸಪ್‌ ಗ್ರೂಪ್‌ಗಳು ಸೇರಿದಂತೆ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾನೆ. ಇದಕ್ಕೆ ಪತ್ನಿ ಆಕ್ಷೇಪಿಸಿದ್ದು, ಆಕೆ ಮತ್ತು ಪುತ್ರಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾತ್ರವಲ್ಲದೆ ಪತ್ನಿಯು ಉಚ್ಚಿಲದ ತನ್ನ ತಾಯಿ ಮನೆಯಲ್ಲಿದ್ದಾಗ ಅಲ್ಲಿಗೂ ಹೋಗಿ ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಸ್ವೀಕರಿಸಿರುವ ಉಡುಪಿ ಸೆನ್‌ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

LEAVE A REPLY

Please enter your comment!
Please enter your name here