ಶಾಲೆ ಪ್ರವೇಶಕ್ಕೆ ಹಿಂದಿನ ಶಾಲೆಯ ವರ್ಗಾವಣೆ ಪತ್ರ ಅಗತ್ಯವಿಲ್ಲ – ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಮಂಗಳೂರು/ಮದ್ರಾಸ್: ಹೊಸ ಶಾಲೆಗೆ ಪ್ರವೇಶ ಪಡೆಯಲು ಹಿಂದಿನ ಶಾಲೆಯ ವರ್ಗಾವಣೆ ಪತ್ರ(ಟಿಸಿ)ದ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಶಾಲೆಗಳು ವರ್ಗಾವಣೆ ಪತ್ರವನ್ನು ಬಾಕಿ ಶುಲ್ಕ ವಸೂಲಿಯ ಸಾಧನವನ್ನಾಗಿ ಮಾಡಿಕೊಳ್ಳುವಂತಿಲ್ಲ ಎಂದು ಅದು ತಾಕೀತು ಮಾಡಿದೆ.

ಮದ್ರಾಸ್ ಹೈಕೋರ್ಟ್‌ನ ನ್ಯಾ. ಎಸ್.ಎಂ. ಸುಬ್ರಹ್ಮಣ್ಯಂ ಮತ್ತು ಸಿ. ಕುಮಾರಪ್ಪನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ‌ನೀಡಿದೆ. ಮಕ್ಕಳ ವರ್ಗಾವಣೆ ಪತ್ರ ಆಯಾ ವಿದ್ಯಾರ್ಥಿಯ ಖಾಸಗಿ ದಾಖಲೆಯಾಗಿರುತ್ತದೆ. ಆ ಸರ್ಟಿಫಿಕೇಟ್‌‌ನ ಶುಲ್ಕ ಪಾವತಿಗೆ ಬಾಕಿ ಇದೆ ಎಂಬಿತ್ಯಾದಿ ಯಾವುದೇ ವಿಚಾರವನ್ನೂ ನಮೂದಿಸುವಂತಿಲ್ಲ ಎಂದು ನ್ಯಾಯಪೀಠ ತಾಕೀತು ಮಾಡಿದೆ. ಶಾಲಾ ಪ್ರವೇಶಾತಿಗೆ ಹಿಂದಿನ ಸಂಸ್ಥೆಗಳ ವರ್ಗಾವಣೆ ಪ್ರಮಾಣಪತ್ರ ತರುವಂತೆ ಒತ್ತಾಯಿಸುವಂತಿಲ್ಲ. ಈ ಬಗ್ಗೆ ರಾಜ್ಯದ ಎಲ್ಲಾ ಶಾಲಾ ಆಡಳಿತ ಮಂಡಳಿಗೆ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ನ್ಯಾಯಪೀಠ ನಿರ್ದೇಶನ ನೀಡಿದೆ. ಶಿಕ್ಷಣದ ಹಕ್ಕು ಕಾಯ್ದೆ ಮತ್ತು ನಿಯಮಗಳಿಗೆ ನ್ಯಾಯಾಲಯದ ನಿರ್ದೇಶನಗಳು ಅನುಗುಣವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಶಿಕ್ಷಣ ನಿಯಮಾವಳಿ ಮತ್ತು ಮೆಟ್ರಿಕ್ಯುಲೆಶನ್ ಶಾಲೆಗಳ ನಿಯಂತ್ರಣ ಸಂಹಿತೆಗೆ ತಿದ್ದುಪಡಿ ಮಾಡುವುದನ್ನುಸರ್ಕಾರ ಪರಿಗಣಿಸಬೇಕು ಎಂದು ಹೇಳಿದೆ.

ಎಲ್ಲಾ ಶುಲ್ಕ ಪಾವತಿಸುವವರೆಗೆ ವಿದ್ಯಾರ್ಥಿಗೆ ಟಿಸಿ ನೀಡದಿರುವುದು ಇಲ್ಲವೇ ಟಿಸಿಯಲ್ಲಿ ಶುಲ್ಕ ಬಾಕಿ ಇದೆ ಮೊದಲಾದ ವಿಚಾರಗಳನ್ನು ಉಲ್ಲೇಖಿಸುವುದು ಆರ್‌ಟಿಇ ಕಾಯ್ದೆಯ ಉಲ್ಲಂಘನೆಯಾಗಿದೆ. ಆರ್‌ಟಿಇ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಮಾನಸಿಕ ಕಿರುಕುಳವಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ. ಪಾಲಕರಿಂದ ಬಾಕಿ ಶುಲ್ಕ ಸಂಗ್ರಹಿಸುವ ಅಥವಾ ಪೋಷಕರ ಆರ್ಥಿಕ ಸಾಮರ್ಥ್ಯ ಅಳೆಯುವ ಸಾಧನ ವರ್ಗಾವಣೆ ಪ್ರಮಾಣಪತ್ರವಲ್ಲ. ಇದು ಮಗುವಿನ ಹೆಸರಿನಲ್ಲಿ ನೀಡುವ ವೈಯಕ್ತಿಕ ದಾಖಲೆಯಾಗಿದೆ. ಟಿಸಿಯಲ್ಲಿ ಅನಗತ್ಯ ವಿವರ ಸೇರಿಸುವ ಮೂಲಕ ಶಾಲೆಗಳು ತಮ್ಮ ಸ್ವಂತದ ಸಮಸ್ಯೆಗಳನ್ನು ಮಗುವಿನ ಮೇಲೆ ಹಾಕುವಂತಿಲ್ಲ ಎಂದು ಕಠಿಣ ಶಬ್ಧಗಳ ಮೂಲಕ ಎಚ್ಚರಿಕೆ ನೀಡಿದೆ.

ಶಾಲೆಗಳಿಗೆ ಬೋಧನಾ ಶುಲ್ಕ ಪಾವತಿಸುವುದು ಪೋಷಕರ ಕರ್ತವ್ಯವಾಗಿದೆ. ಅದನ್ನು ಪೋಷಕರಿಂದ ವಸೂಲಿ ಮಾಡಬೇಕು. ಅದರ ಬದಲಿಗೆ, ಶುಲ್ಕ ಬಾಕಿ ಇದೆ ಎಂಬಿತ್ಯಾದಿ ನಮೂದಿಸುವುದು ಮಗುವಿಗೆ ಮಾಡುವ ಅಪಮಾನವಾಗಿದೆ. ಪೋಷಕರು ಶುಲ್ಕ ಪಾವತಿಸಲು ವಿಫಲರಾದರೆ ಮಗು ಏನು ಮಾಡಲು ಸಾಧ್ಯ? ಇದು ಮಗುವಿನ ತಪ್ಪಲ್ಲ. ಮಗುವಿಗೆ ಕಳಂಕ ತರುವುದು, ಕಿರುಕುಳ ನೀಡುವುದು ಆರ್‌ಟಿಇ ಕಾಯ್ದೆಯ ಸೆಕ್ಷನ್ 17ರ ಪ್ರಕಾರ ಒಂದು ರೀತಿಯ ಮಾನಸಿಕ ಕಿರುಕುಳವಾಗಿದೆ ಎಂದು ನ್ಯಾಯಪೀಠ ಹೇಳಿದೆ.

LEAVE A REPLY

Please enter your comment!
Please enter your name here