ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರುವ ಲಾರಿ ಚಾಲಕ‌ – ರಿಂಗಣಿಸಿದ ಫೋನ್ – ಸರಕಾರದ ವಿರುದ್ಧ ಲಾರಿ ಅಸೋಸಿಯೇಷನ್ ಆಕ್ರೋಶ

ಮಂಗಳೂರು/ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರ ಶೋಧ ಕಾರ್ಯ ಮುಂದುವರೆದಿದೆ. ಇನ್ನು ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದ ಕೇರಳ ನಿವಾಸಿ ಅರ್ಜುನ್​ಗಾಗಿ ಕಳೆದ ಕೆಲ ದಿನಗಳಿಂದ ಶೋಧ ಕಾರ್ಯ ನಡೆಯುತ್ತಲೇ ಇದೆ. ಸದ್ಯ ಈಗ ಅರ್ಜುನ್ ಬದುಕಿರುವ ಬಗ್ಗೆ ಸುಳಿವು ಸಿಕ್ಕಿದೆ. ಆತನ ಫೋನ್ ಹಾಗೂ ಲಾರಿ ಇಂಜೆನ್ ಆನ್​ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇತ್ತ ಅರ್ಜುನ್ ಕುಟುಂಬ ಸದಸ್ಯರು ಆಶಾಭಾವನೆ ಹೊರ ಹಾಕಿದ್ದರೆ ಮತ್ತೊಂದೆಡೆ ಸರ್ಕಾರ ಮತ್ತು ಸಚಿವರ ವಿರುದ್ಧ ಲಾರಿ ಅಸೋಸಿಯೇಷನ್ ಆಕ್ರೋಶ ಹೊರ ಹಾಕಿದೆ.

ಗುಡ್ಡ ಕುಸಿತ ಸಂಭವಿಸಿ ಅರ್ಜುನ್ ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದು ಜು. 18ರ ಗುರುವಾರ ರಾತ್ರಿಯವರೆಗೂ ಲಾರಿ ಇಂಜಿನ್ ಚಾಲನೆಯಲ್ಲಿತ್ತು. ಶುಕ್ರವಾರ ಬೆಳಗ್ಗೆ ಅರ್ಜುನ್‌ನ ಫೋನ್ ರಿಂಗ್ ಆಗಿದೆ. ರೇಂಜ್ ಸಿಕ್ಕಾಗಲೆಲ್ಲ ಫೋನ್ ಆಕ್ಟಿವ್ ಆಗಿದೆ. ಇದರ ಅರ್ಥ ಅವರು ಎಲ್ಲೋ ಒಂದು ಕಡೆ ಬದುಕಿದ್ದಾರೆ ಎಂದು ಅರ್ಜುನ್ ಪತ್ನಿ ಕೃಷ್ಣಪ್ರಿಯಾ ಅವರು ಕೇರಳದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೀಗಾಗಿ ಲಾರಿಯು ಗುಡ್ಡ ಕುಸಿತ ಅವಶೇಷದಲ್ಲಿ ಸಿಲುಕಿರದೇ ಬೇರೆ ಕಡೆಯೂ ಇರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಸಂಶಯ ಹೊರ ಹಾಕಿದ್ದಾರೆ. ಇನ್ನು ಅರ್ಜುನ್ ಬದುಕಿರುವ ಸಾಧ್ಯತೆಗಳು ಹೆಚ್ಚಿವೆ. ನಮ್ಮ ಕಸಿನ್ ಕಾಲ್ ಮಾಡಿದಾಗ ಫೋನ್ ಶುಕ್ರವಾರ ಬೆಳಗ್ಗೆ ಸ್ವಿಚ್ ಆನ್ ಆಗಿತ್ತು. ಕಾರ್ಯಾಚರಣೆಗೆ ಸೇನೆ ಕರೆಸಬೇಕು ಎಂದು ಕಾಣೆಯಾಗಿರುವ ಅರ್ಜುನ್ ಸಹೋದರಿ ಆಗ್ರಹಿಸಿದ್ದಾರೆ. ಇಂದು ರಕ್ಷಣಾ‌ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಆಗಮಿಸಿದೆ.

ಇನ್ನು ಸರ್ಕಾರ ಮತ್ತು ಸಚಿವರ ವಿರುದ್ಧ ಲಾರಿ ಅಸೋಸಿಯೇಷನ್ ಆಕ್ರೋಶ ಹೊರ ಹಾಕಿದೆ. ಗುಡ್ಡಕುಸಿದು ಮೂರ್ನಾಲ್ಕು ದಿನಗಳಾದ್ರು ಇನ್ನೂ ಲಾರಿಯನ್ನು ತೆಗೆದಿಲ್ಲ. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಹೋಗಿ ಪರಿಶೀಲಿಸಿಲ್ಲ ಎಂದು ಬೆಂಗಳೂರಿನಲ್ಲಿ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಹೇಳಿಕೆ ನೀಡಿದ್ದಾರೆ. ಲಾರಿ ಡ್ರೈವರ್​ಗಳು ಅಂದ್ರೆ ರಾಜ್ಯ ಸರ್ಕಾರಕ್ಕೆ ಅಷ್ಟೊಂದು ಕಡೆಗಣನೆ. ನಮ್ಮನ್ನು ಕೂಡ ಗುಡ್ಡ ಕುಸಿದ ಸ್ಥಳಕ್ಕೆ ಹೋಗಲು ಅನುಮತಿ ನೀಡ್ತಿಲ್ಲ. ಗುಡ್ಡ ಕುಸಿದು ಮಂತ್ರಿಗಳೋ ಅಥವಾ ಅವರ ಕಡೆಯವರು ಯಾರಾದರು ಮಣ್ಣಿನೊಳಗಡೆ ಸಿಲುಕಿಕೊಂಡಿದ್ದರೇ ಇವರೆಲ್ಲಾ ಸುಮ್ಮನೇ ಇರ್ತಿದ್ರಾ? ರಾಜ್ಯ ಸರ್ಕಾರ ಕೂಡಲೇ ಲಾರಿ ಚಾಲಕನ ರಕ್ಷಣೆ ಮಾಡಬೇಕು. ನಾಳೆ ಮಧ್ಯಾಹ್ನ 12 ಗಂಟೆಯೊಳಗೆ ಲಾರಿಯನ್ನು ಆಚೆ ತೆಗೆಯಬೇಕು. ಇಲ್ಲದಿದ್ರೆ ಘಟನಾ ಸ್ಥಳದಲ್ಲೇ ಎಲ್ಲ ಲಾರಿಗಳನ್ನು ಅಡ್ಡಲಾಗಿ ಹಾಕಬೇಕಾಗುತ್ತೆ ಎಂದು ರಾಜ್ಯ ಸರ್ಕಾರಕ್ಕೆ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಎಚ್ಚರಿಕೆ ನೀಡಿದ್ದಾರೆ. 

ಈ ನಡುವೆ ಗುಡ್ಡ ಕುಸಿತದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದು ರಕ್ಷಣಾ ಕಾರ್ಯಾಚರಣೆಯ ಪ್ರಗತಿ ಪರಿಶೀಲನೆ ನಡೆಸಿದರು. ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಎದುರಿಸುತ್ತಿರುವ ಸವಾಲಗಳನ್ನು ಮನಗಂಡ ಮುಖ್ಯಮಂತ್ರಿಗಳು ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ, ಉನ್ನತ ಮೆಟಲ್‌ ಡಿಟೆಕ್ಟರ್‌, ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here