ಮಂಗಳೂರು: ಕಾರ್ಗಿಲ್ ವಿಜಯ ದಿವಸ್ 25 ವರ್ಷ ಪೂರೈಸಿದ್ದು, ಯುದ್ದದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಟಿವಿಎಸ್ ಮೋಟಾರ್ ಕಂಪೆನಿ ಸಹಯೋಗದಲ್ಲಿ ನಾರಿ ಶಕ್ತಿ ಕಾರ್ಯಕ್ರಮದಡಿ 25ಮಹಿಳೆಯರ ವಿಶೇಷ ಬೈಕ್ ರ್‍ಯಾಲಿ ಆಯೋಜಿಸಿತ್ತು. ರಾಜ್ಯದಿಂದ ಇಬ್ಬರು ಮಹಿಳೆಯರು ಪಾಲ್ಗೊಂಡಿದ್ದರೆ ಅದರಲ್ಲಿ ಒಬ್ಬಾಕೆ ದ,ಕ ಜಿಲ್ಲೆಯ ಸುಳ್ಯದ ಗುತ್ತಿಗಾರು ಗ್ರಾಮದ ಮಲ್ಕಜೆಯವರು ಎಂಬುದು ಇನ್ನೊಂದು ವಿಶೇಷ. ನ್ಯಾಯವಾದಿ ಪುರುಷೋತ್ತಮ ಮಲ್ಕಜೆ ಹಾಗೂ ಉಷಾ ಮಲ್ಕಜೆ ದಂಪತಿಗಳ ಪುತ್ರಿ ವೃಷ್ಠಿ ಮಲ್ಕಜೆ ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹೆಚ್ಚಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸೇನಾ ಕುಟುಂಬದ ಹೊರತಾಗಿಯೂ ವೃಷ್ಠಿ ಮಲ್ಕಜೆ ರ್‍ಯಾಲಿಯಲ್ಲಿ ಅವಕಾಶ ಪಡೆದಿದ್ದಾರೆ.ಜು.4ರಂದು ಹಿಮಾಚಲ ಪ್ರದೇಶದ ಲೇಹ್ ನಿಂದ ಆರಂಭಗೊಂಡು 12ದಿನಗಳ ಕಾಲ ಸುಮಾರು 2000ಕಿ.ಮೀ ನಷ್ಟು ಕ್ರಮಿಸಿದ ಈ ರ್ಯಾಲಿಗೆ ಟಿ.ವಿ ಎಸ್ ಮೋಟಾರ್ಸ್ ಪೂರ್ಣ ಸಹಕಾರ ನೀಡಿದೆ.