ಮಂಗಳೂರು/ಹೊಸದಿಲ್ಲಿ: ಬ್ಯಾಂಕಿಂಗ್ ಜಾಲದ ಮೇಲೆ ರಾನ್ಸೋಮ್ ವೇರ್ ದಾಳಿಯಿಂದಾಗಿ ಸುಮಾರು 300 ಭಾರತೀಯ ಸ್ಥಳೀಯ ಸಣ್ಣ ಬ್ಯಾಂಕ್ಗಳಲ್ಲಿ ಪಾವತಿ ವ್ಯವಸ್ಥೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬ್ಯಾಂಕ್ಗಳ ಗ್ರಾಹಕರು ಎಟಿಎಂಗಳಲ್ಲಿ ನಗದು ಹಿಂಪಡೆಯುವುದು ಅಥವಾ ಯುಪಿಐ ಬಳಸುವಂತಹ ಪಾವತಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ರಾನ್ಸೋಮ್ ವೇರ್ ದಾಳಿಯು ದೇಶದಾದ್ಯಂತ ಸಣ್ಣ ಬ್ಯಾಂಕ್ಗಳಿಗೆ ಬ್ಯಾಂಕಿಂಗ್ ತಂತ್ರಜ್ಞಾನ ವ್ಯವಸ್ಥೆಯನ್ನು ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ. ಇತರ ಬ್ಯಾಂಕಿಂಗ್ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಕುರಿತು ಮಾಹಿತಿ ನೀಡಿದ್ದು ಈ ದಾಳಿಯಿಂದಾಗಿ ಆರ್ ಟಿ ಜಿ ಎಸ್ ಮತ್ತು ಯುಪಿಐ ಪಾವತಿಗಳಂತಹ ಎಲ್ಲಾ ಆನ್ಲೈನ್ ವಹಿವಾಟುಗಳು ಪರಿಣಾಮ ಬೀರಲಿದೆ. ಸಿ-ಎಡ್ಜ್ ಅನ್ನು ಅವಲಂಬಿಸಿರುವ ಗುಜರಾತ್ನ 17 ಜಿಲ್ಲಾ ಸಹಕಾರಿ ಬ್ಯಾಂಕ್ಗಳು ಸೇರಿದಂತೆ ಭಾರತದ ಸುಮಾರು 300 ಬ್ಯಾಂಕ್ಗಳು ಕಳೆದ ಎರಡು ಮೂರು ದಿನಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಭಾರತದ ರಾಷ್ಟ್ರೀಯ ಸಹಕಾರಿ ಒಕ್ಕೂಟದ ಅಧ್ಯಕ್ಷ ದಿಲೀಪ್ ಸಂಘಾನಿ ತಿಳಿಸಿದ್ದಾರೆ.”ಆರ್ಟಿಜಿಎಸ್ ಮತ್ತು ಯುಪಿಐ ಪಾವತಿಗಳಂತಹ ಎಲ್ಲಾ ಆನ್ಲೈನ್ ವಹಿವಾಟುಗಳು ಪರಿಣಾಮ ಬೀರುತ್ತವೆ. ಕಳುಹಿಸುವವರ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಆದರೆ ಸ್ವೀಕರಿಸುವವರ ಖಾತೆಯಲ್ಲಿ ಜಮೆಯಾಗುವುದಿಲ್ಲ” ಎಂದು ಸಂಘಾನಿ ಹೇಳಿದ್ದಾರೆ.