ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ದಾಳಿ ಪ್ರಕರಣ – ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು

ಮಂಗಳೂರು: ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಳಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಈ ಆದೇಶ ನೀಡಿದ್ದಾರೆ.

12 ವರ್ಷಗಳ ಬಳಿಕ ಮಂಗಳೂರು ಕೋರ್ಟ್‌ ನಿಂದ ಅಂತಿಮ ತೀರ್ಪು ಹೊರಬಿದ್ದಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ದೋಷಮುಕ್ತ ಗೊಳಿಸಲಾಗಿದೆ. ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಓರ್ವ ಪತ್ರಕರ್ತನ ಮೇಲಿನ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿತ್ತು. ಇಂದು ಉಳಿದ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.

2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೆ ದಾಳಿ ನಡೆಸಿದ್ದರು. ಹಿಂಜಾವೇ ಮುಖಂಡ ಸುಭಾಷ್ ಪಡೀಲ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಯುವತಿಯರ ಮೇಲೆ ಕಾರ್ಯಕರ್ತರು ಯದ್ವಾತದ್ವಾ ಹಲ್ಲೆ ನಡೆಸಿದ್ದರು.5 ಹುಡುಗಿಯರು ಸೇರಿದಂತೆ ಪಾರ್ಟಿಯಲ್ಲಿದ್ದ 12 ಜನರನ್ನು ವಿವಸ್ತ್ರಗೊಳಿಸಿ ಥಳಿಸಿದ ಆರೋಪವೂ ಇವರ ಮೇಲಿತ್ತು.ಮದ್ಯ ಸೇವಿಸಿ ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ದಾಳಿ ಮಾಡಲಾಗಿತ್ತು. ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರನ್ನೂ ಬಂಧಿಸಿದ್ದ  ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು, 44 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.  ಇದರಲ್ಲಿ ಓರ್ವ ಪತ್ರಕರ್ತನ ಕೇಸ್ ಸರಕಾರ ವಾಪಾಸ್ ಪಡೆದಿದ್ದು  2018ರಲ್ಲಿ ನ್ಯಾಯಾಲಯ ಖುಲಾಸೆ ಗೊಳಿಸಿತ್ತು.

ಪ್ರಕರಣ ಸಂಬಂಧ ಅಂದು ರಾಜ್ಯ ಮಹಿಳಾ ಆರೋಗವೂ ತನಿಖೆ ನಡೆಸಿ ಅಂದಿನ ಗೃಹ ಸಚಿವ ಆರ್.ಅಶೋಕ್ ಗೆ ವರದಿ ಸಲ್ಲಿಸಿತ್ತು. ಪೊಲೀಸ್ ವೈಫಲ್ಯ ಹಾಗೂ ದಾಳಿಯ ಬಗ್ಗೆ ಡಿಐಜಿ ಗ್ರೇಡ್ ಅಧಿಕಾರಿಯಿಂದ ತನಿಖೆ ನಡೆಸುವಂತೆ ಮಹಿಳಾ ಆಯೋಗ ಶಿಫಾರಸ್ಸು ಮಾಡಿತ್ತು.

ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದಿಸಿದ್ದರು.

LEAVE A REPLY

Please enter your comment!
Please enter your name here