ಮಂಗಳೂರು(ಬೆಂಗಳೂರು): ಹೊರಗುತ್ತಿಗೆ ನೌಕರರಗೂ ಕಾನೂನು ಪ್ರಕಾರ ಹೆರಿಗೆ ರಜೆ, ಮಾತೃತ್ವದ ರಜೆಯ ಹಕ್ಕಿಗೆ ಅರ್ಹರಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ಮಾನ್ಯ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಚಾಂದ್ ಬೀ ಬಳಿಗಾರ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿ ತೊಡಗಿಕೊಂಡಿದ್ದರೂ ಅವರು ಹೆರಿಗೆ ಮತ್ತು ಮಾತೃತ್ವದ ರಜೆಗೆ ಅರ್ಹರಾಗಿದ್ದಾರೆ ಎಂದು ತೀರ್ಪು ನೀಡಿದೆ. ಹೊರಗುತ್ತಿಗೆ ನೌಕರರಾದ ಚಾಂದ್‌ಬಿ ಬಳಿಗಾರ್ ಪರ ಧಾರವಾಡದ ನ್ಯಾಯವಾದಿ ರೋಶನ್ ಸಾಹೇಬ್ ಛಬ್ಬಿ ವಾದ ಮಂಡಿಸಿದ್ದರು.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಚಾಂದ್‌ಬೀ ಬಳಿಗಾರ್ ಅಕೌಂಟೆಂಟ್ ಹುದ್ದೆಗೆ ಹೊರಗುತ್ತಿಗೆ ಆಧಾರದಲ್ಲಿ 2014ರಲ್ಲಿ ನೇಮಕಗೊಳ್ಳುತ್ತಾರೆ. ಹೊರಗುತ್ತಿಗೆದಾರ ಸಂಸ್ಥೆಯು ಬದಲಾಗುತ್ತಿದ್ದರೂ, ಚಾಂದ್‌ಬೀ ಬಳಿಗಾರ್ ಮಾತ್ರ ಅದೇ ಹುದ್ದೆಯಲ್ಲಿ 2014ರಿಂದ 2023ರ ವರೆಗೆ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದರು.
2023ರಲ್ಲಿ ಹೂವಿನಹಡಗಲಿಯ ಕೃಷಿ ಅಧಿಕಾರಿಯವರಲ್ಲಿ ಹೆರಿಗೆ ರಜೆ(ಮಾತೃತ್ವದ ರಜೆ)ಗಾಗಿ ಅರ್ಜಿ ಸಲ್ಲಿಸಿ ರಜೆ ಮೇಲೆ ತೆರಳುತ್ತಾರೆ. ಮಾತೃತ್ವದ ರಜೆ ಮುಗಿದ ಮರುದಿನವೇ ಕೆಲಸಕ್ಕೆ ಹಾಜರಾಗುತ್ತಾರೆ. ಆಗ ಅವರು ನಿರ್ವಹಿಸುತ್ತಿದ್ದ ಅಕೌಂಟೆಂಟ್ ಹುದ್ದೆಯನ್ನು ಇನ್ನೊಬ್ಬರಿಗೆ ನೀಡಿರುವುದು ಗಮನಕ್ಕೆ ಬಂದಿರುತ್ತದೆ.
ತಾವು ಈ ಹುದ್ದೆಯಲ್ಲಿ ತಕ್ಷಣದಿಂದ ಕೆಲಸ ನಿರ್ವಹಿಸಲು ಸಿದ್ಧರಿರುವುದಾಗಿಯೂ, ತಮಗೆ ಈ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಮನವಿ ಪತ್ರ ನೀಡುತ್ತಾರೆ. ಆದರೆ,ಅಧಿಕಾರಿಗಳು ಈ ಮನವಿಗೆ ಯಾವುದೇ ಸ್ಪಂದನೆ ನೀಡುವುದಿಲ್ಲ. ಹಿರಿಯ ಅಧಿಕಾರಿಗಳಿಗೆ ನೀಡಿದ ಮನವಿಗೂ ಅದೇ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.
ಅಂತಿಮವಾಗಿ ಹೈಕೋರ್ಟ್ ಮೆಟ್ಟಿಲೇರಿದ ಬಾಧಿತ ಮಹಿಳೆ ಚಾಂದ್‌ಬಿ ಬಳಿಗಾರ್ ಕಾನೂನು ಸಮರ ಸಾರುತ್ತಾರೆ. ಅವರೊಬ್ಬ ಹೊರಗುತ್ತಿಗೆ ನೌಕರರಾಗಿದ್ದು, ಅವರನ್ನು ನೇಮಿಸಿದ ಖಾಸಗಿ ಗುತ್ತಿಗೆದಾರ ಸಂಸ್ಥೆಯೇ ಅವರಿಗೆ ಹೆರಿಗೆ ರಜೆ ಸೌಲಭ್ಯ ನೀಡಲು ಬಾಧ್ಯತೆ ಹೊಂದಿದೆ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸುತ್ತಾರೆ.
ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಬಾಧಿತ ಮಹಿಳೆ/ ಅರ್ಜಿದಾರರು ಹೆರಿಗೆ ರಜೆಗೆ ತೆರಳುವ ಮುನ್ನ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ಕಾನೂನು ಬದ್ಧ ನೇಮಕಾತಿ ಆಗುವವರೆಗೂ ಅರ್ಜಿದಾರರಿಗೆ ಕೆಲಸಕ್ಕೆ ಅನುಮತಿ ನೀಡಬೇಕು ಎಂದು ಕೃಷಿ ಇಲಾಖೆಗೆ ನಿರ್ದೇಶನ ನೀಡಿದೆ. ಹಾಗೂ ಅರ್ಜಿದಾರರಿಗೆ ಹಿಂದೆ ಬಾಕಿ ಇರುವ ಎಲ್ಲಾ ವೇತನವನ್ನು ಪ್ರಕರಣದ ಖರ್ಚಿನ ಸಹಿತ ಪಾವತಿ ಮಾಡುವಂತೆ ನಿರ್ದೇಶನ ನೀಡಿದೆ.