ಮಂಗಳೂರು(ದೆಹಲಿ): ಮಂಗಳೂರು ಆರ್ಥಿಕ ವಲಯದಲ್ಲಿ ಜೆಬಿಎಫ್ ಪೆಟ್ರೊಕೆಮಿಕಲ್ಸ್ ಮತ್ತು ಗೇಲ್ನ ವಿಲೀನದಿಂದ ಎಸ್ಇಝೆಡ್ ನ ಭೂಮಿ ಕಳೆದುಕೊಂಡ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದಾರೆ.
ಜೆಬಿಎಫ್ ಪೆಟ್ರೋಕೆಮಿಕಲ್ಸ್ ಮತ್ತು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ವಿಲೀನದ ಸಮಸ್ಯೆಗಳ ಕುರಿತು ಚರ್ಚೆ ನಡೆಸುವಂತೆ ಸಂಸದರು ಮಾಡಿದ ಮನವಿಯ ಮೇರೆಗೆ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಅಧ್ಯಕ್ಷತೆಯಲ್ಲಿ ಮತ್ತು ಪೆಟ್ರೋಲಿಯಂ ಕಾರ್ಯದರ್ಶಿ ಪಂಕಜ್ ಜೈನ್, ಗೇಲ್ನ ಸಿಎಮ್ಡಿ ಸಂದೀಪ್ ಗುಪ್ತಾ ಮತ್ತು ಜಿಎಂಪಿಎಲ್ ನ ಸಿಎಮ್ಡಿ ಆಯುಷ್ ಗುಪ್ತಾ ಅವರ ಉಪಸ್ಥಿತಿಯಲ್ಲಿ ದೆಹಲಿಯಲ್ಲಿ ವಿಶೇಷ ಸಭೆ ನಡೆಯಿತು.
ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಭೂಮಿ ಕಳೆದುಕೊಂಡ ಕುಟುಂಬಗಳನ್ನು ಜಿಎಂಪಿಎಲ್ ನಲ್ಲಿ ಭರ್ತಿ ಮಾಡುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿದೆ ಹಾಗೂ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಚೌಟ ಆ ನಂತರದಲ್ಲಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸಚಿವ ಡಾ. ಜೀತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಸಂಸದರ ಈ ಪ್ರಯತ್ನ ಪಿಡಿಎಫ್ ಕುಟುಂಬಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.