ಮಂಗಳೂರು: ಬಾಂಗ್ಲಾ ದೇಶದ ಹಿಂದೂಗಳ ಸುರಕ್ಷತೆಗೆ ಭಾರತ ಸರ್ಕಾರ ಹಾಗೂ ವಿಶ್ವ ಸಮುದಾಯ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಹಿಂದೂ ಪರಿಷತ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅಲ್ಲಿನ ತೀವ್ರಗಾಮಿ ಜಿಹಾದಿ ಶಕ್ತಿಗಳು ಭಾರಿ ಪ್ರಮಾಣದಲ್ಲಿ ದಾಳಿ ನಡೆಸುತ್ತಿವೆ. ಬಾಂಗ್ಲಾದ ಚುನಾಯಿತ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಹಿಂದೂ ಧಾರ್ಮಿಕ ಸ್ಥಳಗಳು, ವ್ಯಾಪಾರ ಸಂಸ್ಥೆಗಳು, ಹಿಂದೂಗಳ ಮನೆಗಳನ್ನು ಗುರಿಯಾಗಿರಿಸಿ ದಾಳಿ ನಡೆಯುತ್ತಿದೆ. ಹಿಂದೂಗಳನ್ನು ಕ್ರೂರವಾಗಿ ಹಿಂಸಿಸುವ ಮೂಲಕ ಮಾನವ ಹಕ್ಕು, ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆ. ಬಾಂಗ್ಲಾ ದೇಶದ ಪ್ರತಿ ಜಿಲ್ಲೆಯಲ್ಲೂ ನೂರಕ್ಕೂ ಹೆಚ್ಚು ಹಿಂದೂ ದೇವಾಲಯಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ. ಹಿಂದೂಗಳ ಮೇಲಿನ ಈ ಹಿಂಸೆ, ದಾಳಿ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಗಾಗಿ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವುದು ವಿಶ್ವ ಸಮುದಾಯದ ಜವಾಬ್ದಾರಿ. ಭಾರತ ಸರ್ಕಾರವು ಬಾಂಗ್ಲಾದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ರಕ್ಷಣೆಗೆ ಸಾಧ್ಯವಿರುವ ಎಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪರಿಸ್ಥಿತಿಯ ಲಾಭ ಪಡೆದು ಗಡಿಯಾಚೆಯಿಂದ ತೀವ್ರಗಾಮಿಗಳು ಭಾರತಕ್ಕೆ ಒಳನುಸುಳುವ ಪ್ರಯತ್ನ ಮಾಡಬಹುದು. ಇದನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಯಾವುದೇ ರೀತಿಯ ಅತಿಕ್ರಮಣಕ್ಕೆ ಅವಕಾಶ ನೀಡಬಾರದು ಎಂದರು.
ವಿಹಿಂಪ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡಿ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ, ಮಹಿಳೆಯರ ಅತ್ಯಾಚಾರ, ಕಲ್ಲು ತೂರಾಟ ಘಟನೆಗಳು ಹಿಂದೂಗಳನ್ನು ತೀವ್ರವಾಗಿ ಘಾಸಿಗೊಳಿಸಿವೆ. ಬಾಂಗ್ಲಾ ವಿಮೋಚನೆಗೆ ಕಾರಣರಾದ ಇಂದಿರಾ ಗಾಂಧಿ ವಸ್ತು ಸಂಗ್ರಹಾಲಯವನ್ನು ನಾಶಪಡಿಸಲಾಗಿದೆ. ಲಕ್ಷಾಂತರ ಮಂದಿಗೆ ಅನ್ನ ನೀಡುತ್ತಿರುವ ಇಸ್ಕಾನ್ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ. ಹಿಂದೂಗಳ ಭದ್ರತೆಗಾಗಿ ವಿಹಿಂಪ ಕೇಂದ್ರೀಯ ಮುಖಂಡರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿನಂತಿಸಿದ್ದಾರೆ. ಹಿಂದೂಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಗೃಹ ಸಚಿವರು ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿಹಿಂಪ ತುರ್ತು ಸಹಾಯವಾಣಿ ಸ್ಥಾಪಿಸಲು ನಿರ್ಧರಿಸಿದೆ. ಶೀಘ್ರ ಅದರ ಸಂಖ್ಯೆ ಬಿಡುಗಡೆ ಮಾಡಲಾಗುವುದು ಎಂದರು.
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಪ್ರಾಂತ ಸಹ ಸಂಯೋಜಕ ಭುಜಂಗ ಕುಲಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.