ಇದೆಂಥ ರಸ್ತೆ ಮಾರ್ರೆ…?! ಹದಗೆಟ್ಟ ಅಜಲಡ್ಕ-ದರ್ಬೆತ್ತಡ್ಕ ರಸ್ತೆ…!

ಹೊಂಡ, ಗುಂಡಿಗಳೇ ತುಂಬಿರುವ ಈ ರಸ್ತೆಯ ಪರಿಸ್ಥಿತಿ ಕೇಳುವವರೇ ಇಲ್ಲದಾಗಿದೆ..?

@ ಸಿಶೇ ಕಜೆಮಾರ್

ಪುತ್ತೂರು: ನೀವೊಮ್ಮ ಅಜಲಡ್ಕ-ಶೇಖಮಲೆ ರಸ್ತೆಯಲ್ಲಿ ಸಂಚರಿಸಬೇಕಿದೆ. ಒಂದು ಸಂಪರ್ಕ ರಸ್ತೆ ಇಷ್ಟೊಂದು ಕೆಟ್ಟು ಹೋಗಿದೆಯಾ ಅಂತ ಆಶ್ಚರ್ಯವಾಗುತ್ತಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯ ಪರಿಸ್ಥಿತಿಯನ್ನು ಕೇಳುವವರೇ ಇಲ್ಲದಾಗಿದೆ. ವಾಹನ ಸವಾರರು ಪ್ರತಿನಿತ್ಯ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ‍್ಯತೆ ಇಲ್ಲಿದೆ. ಹಾಗಂತ ಇದನ್ನು ಯಾರಲ್ಲಿ ಹೇಳಿಕೊಳ್ಳೋದು ಅನ್ನೋದೇ ಇಲ್ಲಿನ ಜನರ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಇದುವರೆಗೆ ಯಾವುದೇ ಪರಿಹಾರ ದೊರಕದೇ ಇರುವುದರಿಂದ ಬೇಸತ್ತುಗೊಂಡ ಈ ಭಾಗದ ಗ್ರಾಮಸ್ಥರು ಅಜಲಡ್ಕದಲ್ಲಿ ಎಚ್ಚರಿಕೆಯ ಫಲಕವೊಂದನ್ನು ಹಾಕಿದ್ದು ‘ರಾಜ್ಯ ಸರಕಾರವೇ ಈ ರಸ್ತೆಯಲ್ಲಿ ನಿಧಿ ಹುಡುಕಿಸುವ ಕೆಲಸ ಮಾಡಿದ ಕಾರಣ ಅಲ್ಲಲ್ಲಿ ಹೊಂಡಗಳನ್ನು ತೋಡಿದ್ದಾರೆ’ ಎಂದು ಅಣಕಿಸಿದ್ದಾರೆ.

ಹೊಂಡಗಳೇ ಈ ರಸ್ತೆಯ ಜೀವಾಳ…?
ಅಜಲಡ್ಕದಿಂದ ಮುಡಾಳದ ತನಕ ಸುಮಾರು 2 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅದರಲ್ಲೂ ಅಜಲಡ್ಕದಿಂದ ನೀರ್ಪಾಡಿ ತನಕ ಬರೇ ಹೊಂಡಗಳೇ ತುಂಬಿಕೊಂಡಿದೆ. ಜಲ್ಲಿ ಕಲ್ಲುಗಳು ಎದ್ದು ಹೋಗಿದ್ದು ದೊಡ್ಡ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದ್ದು ಬರೇ ಹೊಂಡ ಗುಂಡಿಗಳೇ ಈ ರಸ್ತೆಯ ಜೀವಾಳವಾಗಿದೆ ಎಂದರೆ ತಪ್ಪಾಗಲ್ಲ!

ದ್ವಿಚಕ್ರ ವಾಹನ ಸವಾರರ ಪರದಾಟ…!
ಈ ರಸ್ತೆಯಲ್ಲಿ ಸಂಚರಿಸುವುದೆಂದರೆ ಅದೊಂದು ರೀತಿಯ ಸರ್ಕಸ್ ಮಾಡಿದ ಅನುಭವ ಬರುತ್ತದೆ. ಅಲ್ಲಲ್ಲಿ ಚಿತ್ರ ಬಿಡಿಸಿದ ರೀತಿಯಲ್ಲಿ ಡಾಂಬರ್ ಇದ್ದು ರಸ್ತೆ ತುಂಬಾ ಗುಂಡಿಗಳೇ ಎದ್ದು ಕಾಣುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿರುವ ಹೊಂಡ ಗುಂಡಿಗಳು ಯಾವಾಗ ಬೇಕಿದ್ದರೂ ಅಪಾಯವನ್ನು ತರಬಲ್ಲದು. ದ್ವಿಚಕ್ರ ವಾಹನ ಸವಾರರು ತಮ್ಮ ಹಿಂಬದಿ ಸವಾರರನ್ನು ಇಳಿಸಿ ಮುಂದಕ್ಕೆ ಹೋಗಿ ಮತ್ತೆ ಹತ್ತಿಸಿಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿದೆ. ಶಾಲಾ ಮಕ್ಕಳನ್ನು ಹೆತ್ತವರು ಸ್ಕೂಟರ್‌ಗಳಲ್ಲಿ ಪ್ರತಿ ನಿತ್ಯ ಇದೇ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದು ಅಪಾಯ ಸಂಭವಿಸುವ ಮುನ್ನ ಇಲಾಖಾ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಕೆಲವೊಂದು ಕಡೆಯಲ್ಲಿ ಸಾರ್ವಜನಿಕರು ಸೇರಿ ಮಣ್ಣು ಹಾಕಿದ್ದಾರೆ ಆದರೆ ಇದು ವಾಹನ ಸಂಚರಿಸುವಾಗ ನಿಲ್ಲುವುದಿಲ್ಲ. ಸ್ಕೂಟರ್, ಬೈಕ್‌ಗಳಲ್ಲಿ ಸಂಚರಿಸುವುದೇ ಸಾಹಸದ ಕೆಲಸವಾಗಿದೆ. ಮಹಿಳೆಯರು ಚಿಕ್ಕ ಚಿಕ್ಕ ಮಕ್ಕಳನ್ನು ಕುಳ್ಳಿರಿಸಿಕೊಂಡು ಈ ರಸ್ತೆಯಲ್ಲಿ ಬರುತ್ತಾರೆ ಇದನ್ನು ನೋಡುವಾಗ ತುಂಬಾ ಭಯವಾಗುತ್ತದೆ ಎನ್ನುತ್ತಾರೆ ರಾಮಕೃಷ್ಣ ಅಜಲಡ್ಕರವರು.

ನಿಧಿ ಹುಡುಕಿದ ರಾಜ್ಯ ಸರಕಾರ…?!
ಹೀಗೊಂದು ಫಲಕ ಅಳವಡಿಸಿದ ಗ್ರಾಮಸ್ಥರು
ಅಜಲಡ್ಕ ಜಂಕ್ಷನ್‌ನಲ್ಲಿ ಗ್ರಾಮಸ್ಥರು ಎಚ್ಚರಿಕೆ ಫಲಕವೊಂದನ್ನು ಅಳವಡಿಸಿ ಅದರಲ್ಲಿ ‘ಯಾರೋ ಮಾಂತ್ರಿಕರು ಅಜಲಡ್ಕದಿಂದ ಮುಡಾಲವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ. ನಿಧಾನವಾಗಿ ಚಲಿಸಿ’ ಎಂಬ ಬರಹವಿರುವ ಬ್ಯಾನರ್ ಅಳವಡಿಸಿದ್ದಾರೆ.

ಎಕ್ಕುಟ್ಟು ಹೋದ ಸಂಪರ್ಕ ರಸ್ತೆ
ಇದೊಂದು ಸಂಪರ್ಕ ರಸ್ತೆಯಾಗಿದೆ. ಕಾಸರಗೋಡು ಭಾಗದಿಂದ ಬರುವ ವಾಹನ ಸವಾರರು ಪಾಣಾಜೆ, ರೆಂಜ ಮಾರ್ಗವಾಗಿ ನೇರವಾಗಿ ಈ ರಸ್ತೆಯ ಮೂಲಕ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಶೇಖಮಲೆಯಲ್ಲಿ ಸಂಪರ್ಕ ಪಡೆಯಬಹುದಾಗಿದೆ. ಇದಲ್ಲದೆ ಉಕ್ಕುಡ, ಪುಣಚ, ಬುಳೇರಿಕಟ್ಟೆ, ಸಾಜ, ದೇವಸ್ಯ ಈ ಭಾಗದಿಂದ ಬರುವ ವಾಹನ ಸವಾರರು ಕೂಡ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಪಡೆಯಲು ಇದು ಹತ್ತಿರದ ಮಾರ್ಗವಾಗಿದೆ. ಉಪ್ಪಳಿಗೆ, ಅಜಲಡ್ಕ, ನೀರ್ಪಾಡಿ, ದರ್ಬೆತ್ತಡ್ಕ ಇತ್ಯಾದಿ ಭಾಗದ ಜನರಿಗೆ ಕುಂಬ್ರ ಪೇಟೆಗೆ ಬರಲು ಇದು ಬಹಳ ಹತ್ತಿರದ ಸಂಪರ್ಕವಾಗಿದೆ. ಒಟ್ಟಾರೆಯಾಗಿ ಇದೊಂದು ಸಂಪರ್ಕ ರಸ್ತೆಯಾಗಿದ್ದು ಆದರೆ ದುರಸ್ತಿ ಕಾಣದೇ ಎಕ್ಕುಟ್ಟು ಹೋದ ರಸ್ತೆಯಾಗಿದೆ.

ದುರಸ್ತಿ ಕಾಣದೇ ಅದೆಷ್ಟೋ ವರ್ಷಗಳಾಗಿವೆ…?
ಸ್ಥಳೀಯರು ಹೇಳುವ ಪ್ರಕಾರ ಸುಮಾರು 15 ವರ್ಷಗಳ ಹಿಂದೆ ಆಗಿರುವ ಡಾಮರೀಕರಣ ಇದಾಗಿದ್ದು ಆ ಬಳಿಕ ಅಜಲಡ್ಕದಿಂದ ಮುಡಾಳ ತನಕ ಮರು ಡಾಮರೀಕರಣವಾಗಲಿ, ದುರಸ್ತಿಯಾಗಲಿ ಯಾವುದೂ ಆಗಿಲ್ಲ ಎನ್ನಲಾಗಿದೆ. ಶೇಖಮಲೆಯಿಂದ ಮುಡಾಳ ತನಕ ಮರು ಡಾಮರೀಕರಣವಾಗಿದ್ದು ದರ್ಬೆತ್ತಡ್ಕದ ತನಕ ತೇಪೆ ಹಾಕುವ ಕೆಲಸ ಕೂಡ ಆಗಿದೆ. ಆದರೆ ಅಜಲಡ್ಕದಿಂದ ಮಾತ್ರ ಯಾವುದೇ ದುರಸ್ತಿ ಆಗದೇ ಇರುವುದು ವಿಷರ‍್ಯಾಸವೇ ಸರಿ.

ಶಾಸಕರು ಭರವಸೆ ನೀಡಿದ್ದಾರೆ.
ನಮ್ಮ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಕೆಲ ತಿಂಗಳ ಹಿಂದೆ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ನಾವು ಮನವಿ ಮಾಡಿದ್ದೇವೆ. ದುರಸ್ತಿ ಮಾಡಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಜಲಡ್ಕದಿಂದ ಮುಡಾಳ ತನಕವಾದರೂ ಶೀಘ್ರ ದುರಸ್ತಿ ಮಾಡಿಕೊಡಬೇಕಾಗಿ ವಿನಂತಿ.
– ಮಾಧವ ಅಜಲಡ್ಕ, ಉಪಾಧ್ಯಕ್ಷರು ಪುತ್ತೂರು ಬ್ಲಾಕ್ ಕಾಂಗ್ರೆಸ್

ಅಜಲಡ್ಕದಿಂದ ನೀರ್ಪಾಡಿ ತನಕ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು ಹೊಂಡ ಗುಂಡಿಗಳೇ ತುಂಬಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರವಾಗಿ ತೇಪೆ ಹಾಕುವ ಕೆಲಸವನ್ನಾದರೂ ಮಾಡಬೇಕಿದೆ.’
– ಶಾಂತರಾಮ ರೈ ನೀರ್ಪಾಡಿ, ಪ್ರಗತಿಪರ ಕೃಷಿಕರು

ನಮ್ಮ ರಸ್ತೆಯ ಪರಿಸ್ಥಿತಿ ಯಾರಲ್ಲಿ ಹೇಳುವುದು ಎಂಬುದೇ ಅರ್ಥವಾಗುತ್ತಿಲ್ಲ. ಇದೊಂದು ಸಂಪರ್ಕ ರಸ್ತೆಯಾಗಿದ್ದರೂ ಇದನ್ನು ಕಡೆಗಣಿಸಲಾಗಿದೆ. ಪಿಡಬ್ಲ್ಯೂಡಿ ಇಲಾಖೆಗೆ ಕೆಲ ತಿಂಗಳುಗಳ ಹಿಂದೆ ಮನವಿ ಕೊಟ್ಟಿದ್ದೇವೆ. ಶೀಘ್ರವಾಗಿ ರಸ್ತೆಯ ಜಲ್ಲಿ ಕಲ್ಲುಗಳನ್ನು ತೆರವು ಮಾಡಿ, ಗುಂಡಿ ಮುಚ್ಚಿಸುವ ಕೆಲಸವಾದರೂ ಆಗಬೇಕಿದೆ.’
-ನಾರಾಯಣ ಅರ್ತಿಮೂಲೆ, ಪ್ರಗತಿಪರ ಕೃಷಿಕರು

LEAVE A REPLY

Please enter your comment!
Please enter your name here