15 ವರ್ಷ ಹಳೆಯದಾದ ಸರಕಾರಿ ವಾಹನಗಳು ಗುಜುರಿಗೆ

ಹೊಸದಿಲ್ಲಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ, ಸಾರಿಗೆ ನಿಗಮಗಳ ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸೇರಿದ 15 ವರ್ಷಗಳಿಗೂ ಹಳೆಯದಾಗಿರುವ 9 ಲಕ್ಷಕ್ಕೂ ಅಧಿಕ ವಾಹನಗಳು ಎ.1ರಿಂದ ರಸ್ತೆಗಿಳಿಯುವುದಿಲ್ಲ. ಬದಲಾಗಿ ಹೊಸ ವಾಹನಗಳು ಬರಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಫಿಕ್ಕಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಎಥೆನಾಲ್, ಮಿಥೆನಾಲ್, ಜೈವಿಕ ಸಿಎನ್ಐ, ಜೈವಿಕ ಎನ್ಎನ್‌ ಜಿ ಮತ್ತು ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸುಲಭಗೊಳಿಸಲು ಸರಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ , 15 ವರ್ಷಗಳಿಗೂ ಹಳೆಯದಾದ ಒಂಭತ್ತು ಲಕ್ಷಕ್ಕೂ ಅಧಿಕ ಸರಕಾರಿ ವಾಹನಗಳ ನೋಂದಣಿ ಎ.1ರಿಂದ ರದ್ದುಗೊಳ್ಳುತ್ತದೆ ಮತ್ತು ಅವುಗಳನ್ನು ಗುಜರಿಗೆ ಹಾಕುವುದನ್ನು ಅನುಮೋದಿಸಲಾಗಿದೆ. ವಾಯುಮಾಲಿನ್ಯವನ್ನುಂಟು ಮಾಡುವ ವಾಹನಗಳು ರಸ್ತೆಯಿಂದ ಹೊರಗಿರಲಿದ್ದು, ಪರ್ಯಾಯ ಇಂಧನ ಬಳಕೆಯ ಹೊಸ ವಾಹನಗಳು ರಸ್ತೆಗಿಳಿಯಲಿವೆ. ಇದರಿಂದ ವಾಯಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ದೇಶದ ರಕ್ಷಣೆಗಾಗಿ ಹಾಗೂ ಕಾನೂನು ಮತ್ತು ಭದ್ರತೆ,ಆಂತರಿಕ ಭದ್ರತೆಯನ್ನು ಕಾಯ್ದುಕೊಳ್ಳಲು ಬಳಕೆಯಾಗುವ ವಿಶೇಷ ಉದ್ದೇಶದ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆರಂಭಿಕ ನೋಂದಣಿ ದಿನಾಂಕದಿಂದ 15 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿರುವ ವಾಹನಗಳು 2021ರ ಮೋಟರ್ ವಾಹನಗಳ ನಿಯಮಗಳಡಿ ಸ್ಥಾಪಿಸಲಾಗಿರುವ ನೋಂದಣಿಗೊಂಡಿರುವ ವಾಹನಗಳ ಗುಜರಿ ಕೇಂದ್ರಗಳ ಮೂಲಕ ವಿಲೇವಾರಿಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here