ಉಡುಪಿ: ನಗರದ ಕುಂಜಿಬೆಟ್ಟು ಶಾರದಾ ಮಂಟಪದಿಂದ ಬೀಡಿನ ಗುಡ್ಡೆವರೆಗಿನ ಸುಸ್ಥಿತಿಯಲ್ಲಿರುವ ರಸ್ತೆಯನ್ನು ಅಗೆದು ಕಾಂಕ್ರೀಟೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ, ನಗರಸಭೆ ಮಾಜಿ ಸದಸ್ಯ ನಿತ್ಯಾನಂದ ಒಳಕಾಡು ಮಾ.6ರಂದು ಜೆಸಿಬಿಗೆ ಅಡ್ಡವಾಗಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ನಗರಸಭೆ ಬಿಜೆಪಿ ಸದಸ್ಯ ಗಿರೀಶ್ ಅಂಚನ್ ಹಾಗೂ ನಿತ್ಯಾನಂದ ವಳಕಾಡು ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ಐದು ದಿನಗಳಿಂದ ಕಾಂಕ್ರಿಟ್ ರಸ್ತೆಯನ್ನು ಅಗೆಯಲಾಗುತ್ತಿದ್ದು, ಎರಡು ದಿನಗಳ ಹಿಂದೆಯೇ ಇದಕ್ಕೆ ನಿತ್ಯಾನಂದ ಒಳಕಾಡು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ನಗರ ಸಭೆಯ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಸುಸ್ಥಿತಿಯಲ್ಲಿರುವ ರಸ್ತೆಯನ್ನು ಅಗೆದು ಮರು ಕಾಂಕ್ರೀಟೀಕರಣ ಮಾಡುವುದು ಸರಿಯಲ್ಲ. ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ. ಇದೊಂದು ದುಂದು ವೆಚ್ಚದ ಕಾಮಗಾರಿ ಎಂದು ನಿತ್ಯಾನಂದ ಒಳಕಾಡು ಆರೋಪಿಸಿದ್ದಾರೆ.