ನಾಸಿಕ್: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನ್ಯಾಯಯುತ ಬೆಲೆಯನ್ನು ಖಾತ್ರಿಗೊಳಿಸಲು ವಿಫಲವಾಗಿದೆಯೆಂದು ಆಕ್ರೋಶಗೊಂಡ ರೈತನೊಬ್ಬ ತಿಂಗಳುಗಟ್ಟಲೆ ಶ್ರಮವಹಿಸಿ ತನ್ನ ಹೊಲದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಬೆಂಕಿ ಹಚ್ಚಿ ನಾಶಗೊಳಿಸಿರುವ ಘಟನೆ ನಾಸಿಕ್ ಜಿಲ್ಲೆಯ ಯಿಯೋಲಾ ತಾಲ್ಲೂಕಿನಲ್ಲಿ ನಡೆದಿದೆ.
ನಾಸಿಕ್ ಜಿಲ್ಲೆಯ ಯಿಯೋಲಾ ತಾಲ್ಲೂಕಿನ ಕೃಷ್ಣ ಡೊಂಗ್ರೆ ಎಂಬ ರೈತ ತನ್ನ ಈರುಳ್ಳಿ ಬೆಲೆಗೆ ಸೂಕ್ತ ಬೆಲೆ ದೊರೆಯದಿದ್ದುದರಿಂದ ಹತಾಶಗೊಂಡು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಬೆಂಕಿ ಹಚ್ಚಿ ನಾಶಗೊಳಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ರೈತ, ತಾನು ಕಳೆದ ನಾಲ್ಕು ತಿಂಗಳಿನಿಂದ ಈರುಳ್ಳಿ ಬೆಳೆಗೆ ರೂ. 1.5 ಲಕ್ಷ ವ್ಯಯಿಸಿದ್ದು, ಮಾರುಕಟ್ಟೆಗೆ ಸಾಗಿಸಲು ಮತ್ತೆ ರೂ. 30,000 ವೆಚ್ಚ ಮಾಡಬೇಕಿದೆ. ಹೀಗಿದ್ದೂ, ಈಗಿನ ಈರುಳ್ಳಿ ಮಾರುಕಟ್ಟೆ ದರದಲ್ಲಿ ನನಗೆ ಕೇವಲ ರೂ. 25,000 ದೊರೆಯಲಿದೆ” ಎಂದು ಅಳಲು ತೋಡಿಕೊಂಡಿದ್ದಾರೆ. ಈರುಳ್ಳಿ ದಹನದ ಸಮಾರಂಭಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂದೆಯವರಿಗೆ ನನ್ನ ರಕ್ತದಲ್ಲಿ ಪತ್ರ ಬರೆದು ಆಮಂತ್ರಿಸಿದ್ದು, ಆ ಸಂದರ್ಭದಲ್ಲಿ ಅವರು ಖುದ್ದು ರೈತರ ಪರಿಸ್ಥಿತಿಯನ್ನು ನೋಡಬಹುದಾಗಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಕುಸಿಯುತ್ತಿರುವ ಈರುಳ್ಳಿ ಬೆಲೆಗೆ ಪರಿಹಾರ ಹಾಗೂ ಈರುಳ್ಳಿ ರಪ್ತಿನ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಆಗ್ರಹಿಸಿ ಮಹಾರಾಷ್ಟ್ರ ಅಹಮ್ಮದ್ ನಗರದ ರೈತರ ಗುಂಪೊಂದು ಪ್ರಧಾನಿ ನರೇದ್ರ ಮೋದಿಯವರಿಗೆ ಈರುಳ್ಳಿಯನ್ನು ಅಂಚೆ ಮೂಲಕ ಕಳುಹಿಸಿ ಕೊಟ್ಟಿದೆ.