ಯು ಪಿ: “ಕೆಳಗಿಟ್ಟರೆ ಇರುವೆ ಕೊಂಡುಹೋಗಬಹುದು, ಮೇಲಿಟ್ಟರೆ ಕಾಗೆ ಕೊಂಡು ಹೋಗಬಹುದು” ಎಂಬ ಗಾದೆ ಮಾತು ಮಕ್ಕಳ ಮೇಲಿನ ಪ್ರೀತಿಯ ಹಿನ್ನಲೆಯಲ್ಲಿ ಹುಟ್ಟಿಕೊಂಡಿದೆ. ಮಕ್ಕಳಿಗಾಗಿ ಜೀವ ತೇಯುವ ತಂದೆ ತಾಯಿಗಳು ಒಂದೆಡೆಯಾದರೆ ವೃದ್ದಾಪ್ಯದಲ್ಲಿ ಹೆತ್ತವರನ್ನು ದೂರ ಮಾಡುವ ಮಕ್ಕಳು ಇನ್ನೊಂದೆಡೆ. ತನ್ನ ಎಲ್ಲಾ ಚಿರ ಚರ ಸ್ವತ್ತುಗಳನ್ನು ಮಕ್ಕಳಿಗೆ ಧಾರೆ ಎರೆದು ಮಕ್ಕಳ ಪ್ರೀತಿಗಾಗಿ ಹಂಬಲಿಸುವ ಹೆತ್ತವರ ನಡುವೆ ನಾತುಸಿಂಗ್ ಎಂಬ 80ರ ವೃದ್ದ ಸ್ವಲ್ಪ ಭಿನ್ನ. ವೃದ್ದಾಪ್ಯದಲ್ಲಿ ತನ್ನನ್ನು ನೋಡಿ ಕೊಳ್ಳದ ಮಗ ಮತ್ತು ಸೊಸೆಗೆ ಜಗ ಮೆಚ್ಚುವ ಶಾಕ್ ನೀಡಿದ್ದು,
ತನ್ನೆಲ್ಲಾ ಆಸ್ತಿಯನ್ನು ರಾಜ್ಯ ಪಾಲರ ಮೂಲಕ ಸರಕಾರಕ್ಕೆ ಉಯಿಲು ಮಾಡಿ ಅಫಿದಾವಿತ್ ಸಲ್ಲಿಸಿದ್ದಾರೆ. ನನ್ನ ಮಗ ಮತ್ತು ಸೊಸೆ ನನ್ನನ್ನು ಸರಿಯಾಗಿ ನೋಡಿ ಕೊಳ್ಳಲಿಲ್ಲ. ಹಾಗಾಗಿ ಆಸ್ತಿಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದೇನೆ, ಇದನ್ನು ಸಮರ್ಪಕವಾಗಿ ಬಳಸಿಕೊಂಡು ಆ ಸ್ಥಳದಲ್ಲಿ ಸರಕಾರ ಶಾಲೆ ಅಥವಾ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ನಾತುಸಿಂಗ್ ಅಫಿದಾವಿತ್ ನಲ್ಲಿ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮುಝಾಫರ್ ನಗರದ ಬೀರಾಲ್ ಗ್ರಾಮದ ನಾತುಸಿಂಗ್ ಅವರಿಗೆ ಒಂದು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದಾರೆ. ವೃದ್ದಾಪ್ಯದಲ್ಲಿ ಯಾರೂ ಅವರನ್ನು ನೋಡಿ ಕೊಳ್ಳದ ಕಾರಣ ಸಧ್ಯ ವೃದ್ದಾಶ್ರಮದಲ್ಲಿರುವ ಸಿಂಗ್ ತನ್ನ 1.5 ಕೋಟಿ ಮೌಲ್ಯದ ಆಸ್ತಿಯನ್ನು ಸರಕಾರಕ್ಕೆ ನೀಡಿದ್ದಾರೆ. ಇದನ್ನು ಆಶ್ರಮದ ಉಸ್ತುವಾರಿ ರೇಖಾಸಿಂಗ್ ದೃಢಪಡಿಸಿದ್ದು, ನಾತುಸಿಂಗ್ ಮರಣದ ನಂತರ ಇದು ಜಾರಿಗೆ ಬರಲಿದೆ.