ಮಂಗಳೂರು: ಪ್ರಾಣಿ ಪಕ್ಷಿಗಳಲ್ಲಿ ಸಹಜವಾಗಿ ಎಲ್ಲರಿಗೂ ಪ್ರೀತಿ ಇರುವುದು ನಿಜ. ನೋಡಲು ಚಂದ, ಕ್ಯಾಮರಾದಲ್ಲಿ ಸೆರೆ ಹಿಡಿಯಲು ಬಲು ಅಂದ. ಆದರೆ ಬದುಕಿನ ದಾರಿಯಲ್ಲಿ ಎಷ್ಟೇ ನೋವುಂಡರೂ ಅಳುವನ್ನು ಮರೆ ಮಾಚಿ ನಗುನಗುತ್ತಾ ಮೂಕ ಪ್ರಾಣಿ-ಪಕ್ಷಿಗಳ ಸೇವೆಯಲ್ಲಿ ನಿರತರಾಗಿರುವ ಮಹಿಳೆ ರಜನಿ ಶೆಟ್ಟಿಯವರನ್ನು ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳುವುದು ಸೂಕ್ತ. ಮೂಕ ಪ್ರಾಣಿ-ಪಕ್ಷಿಗಳಿಗಾಗಿ ಮಿಡಿಯುವ ಈ ಮಹಿಳೆ ಬಗ್ಗೆ ನೀವು ತಿಳಿಯಲೇ ಬೇಕು.
ಆಕಸ್ಮಿಕವಾಗಿ ಬಾವಿಗೆ ಬಿದ್ದ ಪ್ರಾಣಿಗಳನ್ನು ಹಗ್ಗದ ಸಹಾಯದಿಂದ ತನ್ನ ಪ್ರಾಣ ಲೆಕ್ಕಿಸದೆ ಬಾವಿಗಿಳಿದು ರಕ್ಷಣೆ ಮಾಡಿ ಮೂಕ ಪ್ರಾಣಿಯ ವೇದನೆಗೆ ಮರುಗುವ ಅಪರೂಪದ ಮಹಿಳೆ ರಜನಿ ಶೆಟ್ಟಿ.
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಸಣ್ಣ ಬಾಡಿಗೆ ಮನೆಯೊಂದರಲ್ಲಿ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ರಜನಿ ಶೆಟ್ಟಿ, ತಮ್ಮ ಮನೆಯನ್ನು ಗಾಯಗೊಂಡ, ರೋಗಗ್ರಸ್ತ ನಾಯಿ, ಬೆಕ್ಕು, ಹಕ್ಕಿಗಳಿಗೆ ಮೀಸಲಿಟ್ಟಿದ್ದಾರೆ. ತನ್ನ ಮಕ್ಕಳಂತೆ ಪ್ರೀತಿಯಿಂದ ಆಹಾರ, ಚಿಕಿತ್ಸೆ ನೀಡಿ, ಮೈದಡವಿ, ಮುದ್ದು ಮಾಡುವುದು ರಜನಿಯವರ ನಿತ್ಯ ಕಾಯಕ. ಅಮ್ಮ ತನ್ನ ಮಕ್ಕಳನ್ನು ಪ್ರೀತಿಸುವಂತೆಯೇ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ರಜನಿ ಈ ನಾಡು ಕಂಡ ಅಪರೂಪದ ಮೂಕಜೀವಿಗಳ ಪ್ರೇಮಿ.
ಮನೆಯ ನಾಯಿ ಅನಾರೋಗ್ಯಕ್ಕೆ ತುತ್ತಾದರೆ ವೈದ್ಯರ ಬಳಿ ಕರೆದೊಯ್ಯಲು ಹಿಂಜರಿಯುವ ಜನರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಕೆಲವೊಮ್ಮೆ ಹಣದ ಸಮಸ್ಯೆ ಅಥವಾ ಇನ್ನಾವುದೋ ಕಾರಣಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗದೆ ಸಾಕು ಪ್ರಾಣಿ ಸಾವನ್ನಪ್ಪಿದ ಅದೆಷ್ಟೋ ಘಟನೆಗಳು ನಮ್ಮ ಮುಂದಿದೆ. ರೋಗ ಪೀಡಿತ ಬೀದಿ ನಾಯಿಯನ್ನು ಮನೆಗೆ ತಂದು ಸಲಹುವ ರಜನಿಯವರ ನಿಷ್ಕಲ್ಮಶ ಮನಸ್ಸು, ಹೃದಯ ಅಕ್ಷರಗಳಿಗೆ ನಿಲುಕದ್ದು.
ಅಪಘಾತಕ್ಕೊಳಗಾಗಿ ಅಂಗವೈಕಲ್ಯಗೊಂಡ, ಕರುಣೆ ಇಲ್ಲದ ಯಾರೋ ಇಟ್ಟ ವಿಷಪೂರಿತ ಆಹಾರ ತಿಂದು ಸಾವಿನಂಚಿನಲ್ಲಿರುವ ಬೀದಿ ನಾಯಿಗಳಿಗೂ ಬದುಕುವ ಬದುಕುವ ಹಕ್ಕಿದೆ ಎನ್ನುವುದನ್ನರಿತು, ಪ್ರಚಾರದ ಗೀಳಿಲ್ಲದೆ ತಮ್ಮ ಪಾಡಿಗೆ ಮೂಕ ಪ್ರಾಣಿಗಳ ಸೇವೆ ಮಾಡಿಕೊಂಡು ಬಂದ ರಜನಿ ಶೆಟ್ಟಿಯವರದ್ದು ಸಾಹಸದಲ್ಲೂ ಎತ್ತಿದ ಕೈ.
ನಾಯಿ, ಬೆಕ್ಕು ಬಾವಿಗೆ ಬಿದ್ದರೆ ಅರಣ್ಯ ಇಲಾಖೆ, ಅಗ್ನಿಶಾಮಕ ದಳಕ್ಕಿಂತ ಮೊದಲು ಕರೆ ಸ್ವೀಕರಿಸುವವರು ರಜನಿ ಶೆಟ್ಟಿ. ಮಾತ್ರವಲ್ಲ ಮಿಂಚಿನ ವೇಗದಲ್ಲಿ ಸ್ಥಳಕ್ಕೆ ತಲುಪಿ, ಜೀವದ ಹಂಗು ತೊರೆದು ಸರ ಸರನೆ ಬಾವಿಗಿಳಿದು ಅವುಗಳನ್ನು ಮೇಲೆತ್ತಿ ರಕ್ಷಿಸುವ ರಜನಿ ಆ ಸಾಕು ಪ್ರಾಣಿಗಳ ಪಾಲಿನ ಜೀವದಾತೆ. ಇದುವರೆಗೆ ಅವರು ರಕ್ಷಿಸಿದ ನಾಯಿ ಬೆಕ್ಕುಗಳ ಸಂಖ್ಯೆ ಅಪಾರ. ಮರ ಕಡಿಯುವಾಗ ಗಾಯಗೊಂಡು ಹಾರಲಾಗದ ಸ್ಥಿತಿಯಲ್ಲಿರುವ ಹಕ್ಕಿಗಳನ್ನು ತಂದು ತಮ್ಮ ಮನೆಯಂಗಳದಲ್ಲಿ ಚಿಕಿತ್ಸೆ ನೀಡಿ, ಆರೈಕೆ ಮಾಡಿ ಮತ್ತೆ ಅವುಗಳು ಬಾನೆತ್ತರಕ್ಕೆ ಹಾರುವುದನ್ನು ನೋಡಿ ಕಣ್ತುಂಬಿ ಕೊಳ್ಳುವ ರಜನಿ ಅವರಿಂದ ಆಸರೆ ಪಡೆದು ಆರೈಕೆ ಮಾಡಿಸಿಕೊಂಡ ಹಕ್ಕಿಗಳ ಪಟ್ಟಿಯಲ್ಲಿ ಗಿಳಿ, ಹದ್ದುಗಳು ಸೇರಿದೆ. ಗಾಯಗೊಂಡ ಪ್ರಾಣಿ-ಪಕ್ಷಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ರಜನಿ ಅವರ ಅಡುಗೆ ಕೋಣೆಯಲ್ಲಿ ಪ್ರತಿದಿನ 60ಕಿ.ಲೋ ಅಕ್ಕಿಯ ಕೋಳಿ ಮಾಂಸ ಮಿಶ್ರಿತ ಅನ್ನವನ್ನು ತಯಾರಿಸಿ ಸುಮಾರು 800ಕ್ಕೂ ಹೆಚ್ಚು ನಾಯಿಗಳಿಗೆ ಬಡಿಸಲಾಗುತ್ತದೆ. ಪ್ರತಿದಿನ ಮಗಳು ಅಥವಾ ಪತಿ ದಾಮೋದರ್ ಶೆಟ್ಟಿಯವರ ಜೊತೆ ಸ್ಕೂಟರ್ನಲ್ಲಿ ಮಂಗಳೂರಿನ ಮೂಲೆ ಮೂಲೆಗೂ ತೆರಳಿ, ನಾಯಿಗಳ ಮೈದಡವಿ, ಅನ್ನ ಹಾಕಿ ಅವುಗಳ ಹಸಿವು ನೀಗಿಸುವ ರಜನಿ ಅವರನ್ನು ದೂರದಿಂದಲೇ ಗುರುತಿಸುವ ನಾಯಿಗಳು ಓಡೋಡಿ ಹತ್ತಿರ ಬಂದು ಸುತ್ತುವರಿದು ಬಾಲವನ್ನಾಡಿಸಿ ಪ್ರೀತಿ ತೋರುತ್ತದೆ. ಕಳೆದ 16 ವರ್ಷಗಳಿಂದ ಶ್ವಾನಗಳಿಗೆ ಅನ್ನ ಹಾಕುವ ರಜನಿ ಇದುವರೆಗೆ 2500ರಷ್ಟು ಪ್ರಾಣಿಗಳನ್ನು ರಕ್ಷಿಸಿದ್ದಾರೆ.ಸ್ವಂತ ದುಡಿಮೆಯಿಂದ ಬಂದ ಹಣದಿಂದ ಶ್ವಾನಗಳಿಗೆ ಅನ್ನ ಬೇಯಿಸಿ ಹಾಕುವ ರಜನಿ ಕಾಯಕಕ್ಕೆ ಮನೆಯವರು ಮತ್ತು ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ರಜನಿ ಸಾಧನೆಗೆ ಈಗಾಗಲೇ ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದಿದೆ. ಅಡುಗೆ ಮನೆ ಎನ್ನುವ ಪುಟ್ಟ ಪ್ರಪಂಚದಲ್ಲಿ ಸಂತೋಷ ಕಾಣುತ್ತಾ ಪತಿ, ಮಕ್ಕಳ ಏಳಿಗೆಗಾಗಿ ಬದುಕುವ ಮಹಿಳೆಯರ ನಡುವೆ ರಜನಿ ಶೆಟ್ಟಿ ಯಾವತ್ತೂ ವಿಭಿನ್ನ. ರಜನಿಗಂಧ ಹೂವಿನಂತೆ ರಜನಿ ಶೆಟ್ಟಿಯವರ ಹೆಸರು ಈ ನಾಡಿನಾದ್ಯಂತ ಪಸರಿಸಲಿ, ಅವರ ಕಾಯಕ ಇನ್ನೊಬ್ಬರಿಗೆ ಪ್ರೇರಣೆಯಾಗಲಿ, ಮೂಕಪ್ರಾಣಿ – ಪಕ್ಷಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ.
ಬರಹ: ಹರ್ಷಿತಾ ಹರೀಶ್ ಕುಲಾಲ್, ಐವರ್ನಾಡು