ಮಂಗಳೂರು : ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕೊನೆ ಘಳಿಗೆಯಲ್ಲಿ ಘೋಷಿಸುವ ಬದಲು ಮೂರು ತಿಂಗಳು ಮುಂಚಿತವಾಗಿ ಪ್ರಕಟಿಸುವುದಾಗಿ ಹೇಳಿತ್ತು. ಚುನಾವಣೆಗೆ ಎರಡು ತಿಂಗಳಷ್ಟೇ ಬಾಕಿ ಇದ್ದು ಇನ್ನೂ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿಲ್ಲ. ಬಲ್ಲ ಮೂಲಗಳ ಪ್ರಕಾರ ಮೊದಲ ಹಂತದಲ್ಲಿ ನೂರರಿಂದ, ನೂರಿಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಹೈ ಕಮಾಂಡ್ ಗೆ ಕಳುಹಿಸಲಾಗಿದ್ದು, ಅಂತಿಮ ಮೊಹರು ಬಿದ್ದು ಮಾರ್ಚ್ 20 ರಷ್ಟರಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.
ಈ ನಡುವೆ, ಹಿಂದೆ ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದು ಈಗ ಬಿಜೆಪಿ ಯ ಭದ್ರ ಕೋಟೆಯಾಗಿ ಬದಲಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಘೋಷಣೆಯಾಗಲಿದೆ ಎನ್ನಲಾಗಿದೆ. ಸುಳ್ಯ ಕ್ಷೇತ್ರಕ್ಕೆ ಮಡಿಕೇರಿ ಮೂಲದ ನಂದಕುಮಾರ್, ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ, ಬಂಟ್ವಾಳ ಕ್ಷೇತ್ರಕ್ಕೆ ರಮಾನಾಥ ರೈ ಮತ್ತು ಮಂಗಳೂರು (ಉಳ್ಳಾಲ) ಕ್ಷೇತ್ರಕ್ಕೆ ಯು ಟಿ ಖಾದರ್ ಹೆಸರು ಮೊದಲ ಪಟ್ಟಿಯಲ್ಲಿದೆ ಎನ್ನಲಾಗಿದ್ದು ಉಳಿದಂತೆ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದ್ರೆ ಮತ್ತು ಬೆಳ್ತಂಗಡಿ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು 2ನೇ ಅಥವಾ 3ನೇ ಪಟ್ಟಿಯಲ್ಲಿ ಪ್ರಕಟವಾಗಲಿದೆ.
ಇನ್ನೊಂದೆಡೆ ಬಿಜೆಪಿಯಲ್ಲಿ ಈ ಬಾರಿ 12ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಆಗುವ ಸಾಧ್ಯತೆ ಇದ್ದು ವಲಸಿಗ ಮತ್ತು ಮೂಲ ಶಾಸಕರು ಇದರಲ್ಲಿ ಸೇರಿದ್ದಾರೆ ಎನ್ನಲಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಷಾ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಬಿ ಎಲ್ ಸಂತೋಷ್,ಭಾಗವಹಿಸಿರುವ ಪ್ರಾಥಮಿಕ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ. ದ.ಕ ಜಿಲ್ಲೆಯಲ್ಲಿಯೂ ಕೆಲವು ಹಾಲಿ ಶಾಸಕರಿಗೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.